ADVERTISEMENT

ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತೆ: ಕಾಂಗ್ರೆಸ್ ವಿರುದ್ಧ ಸುಧಾಕರ್ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2022, 6:14 IST
Last Updated 20 ನವೆಂಬರ್ 2022, 6:14 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಬೆಂಗಳೂರು: ಖಾಸಗಿ ಸಂಸ್ಥೆಯೊಂದಕ್ಕೆ ಮತದಾರರ ಪಟ್ಟಿ ಪರಿಷ್ಕರಣೆಯ ಅನುಮತಿ ನೀಡಿರುವುದು ಕಾಂಗ್ರೆಸ್‌ –ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ 2017ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರವೇ ಅನುಮತಿ ಕೊಟ್ಟ ಒಂದು ಸಂಸ್ಥೆಯ ಮೇಲೆ ಈಗ ಇಲ್ಲಸಲ್ಲದ ಆರೋಪ ಮಾಡಿ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ‘ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತಾಗಿದೆ’ ಎಂದು ಸುಧಾಕರ್ ಕಿಡಿಕಾರಿದ್ದಾರೆ.

ADVERTISEMENT

‘ಕುಣಿಯಲಾರದವನಿಗೆ ನೆಲ ಡೊಂಕು' ಎಂಬಂತೆ ಜನರ ವಿಶ್ವಾಸ ಕಳೆದುಕೊಂಡು ಹತಾಶಗೊಂಡಿರುವ ಕಾಂಗ್ರೆಸ್ ಪಕ್ಷ ಮತಯಂತ್ರಗಳ ಮೇಲೆ ಸಂಶಯ ಮೂಡಿಸುವುದು, ಚುನಾವಣಾ ಆಯೋಗದ ಬಗ್ಗೆ ಅಪಸ್ವರ ಎತ್ತುವುದು ಹೀಗೆ ಒಂದಲ್ಲಾ ಒಂದು ಕ್ಯಾತೆ ತೆಗೆಯುತ್ತಲೆ ಬಂದಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪ ಈ ಸುಳ್ಳುಗಳ ಸರಮಾಲೆಗೆ ಹೊಸ ಸೇರ್ಪಡೆಯಷ್ಟೆ’ ಎಂದಿದ್ದಾರೆ.

‘ದಿಟ್ಟ ನಾಯಕತ್ವ, ಅಭಿವೃದ್ಧಿ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮೂಲಕ ದೇಶದಾದ್ಯಂತ ಜನಮನ್ನಣೆ ಪಡೆಯುತ್ತಿರುವ ನಮ್ಮ ಪಕ್ಷಕ್ಕೆ ಚುನಾವಣೆ ಗೆಲ್ಲಲು ಯಾವುದೇ ವಾಮ ಮಾರ್ಗದ ಅವಶ್ಯಕತೆಯೂ ಇಲ್ಲ ಅದರ ಬಗ್ಗೆ ನಂಬಿಕೆಯೂ ಇಲ್ಲ’ ಎಂದು ಸುಧಾಕರ್ ತಿಳಿಸಿದ್ದಾರೆ.

‘ಬಿಜೆಪಿ ಸರ್ಕಾರದ ವಿರುದ್ಧ ರಚನಾತ್ಮಕ ಹೋರಾಟ ಮಾಡಲು ಯಾವುದೇ ವಿಷಯಗಳಲ್ಲಿದೆ ಹತಾಶಗೊಂಡಿರುವ ಕಾಂಗ್ರೆಸ್ ನಾಯಕರು ದಿನಕ್ಕೊಂದು ಕಟ್ಟುಕಥೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದು, ಬಿಜೆಪಿ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯುವ ಭರಾಟೆಯಲ್ಲಿ ತಮಗೆ ತಾವೇ ಮಸಿ ಬಳಿದುಕೊಳ್ಳುತ್ತಿದ್ದಾರೆ’ ಎಂದು ಸುಧಾಕರ್ ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.