ADVERTISEMENT

ಕಪ್ಪು ಶಿಲೀಂಧ್ರ ರೋಗಕ್ಕೆ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ: ಡಾ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 24 ಮೇ 2021, 9:55 IST
Last Updated 24 ಮೇ 2021, 9:55 IST
ಸಚಿವ ಡಾ.ಕೆ. ಸುಧಾಕರ್
ಸಚಿವ ಡಾ.ಕೆ. ಸುಧಾಕರ್    

ಬೆಂಗಳೂರು: ರಾಜ್ಯದಲ್ಲಿ 300ಕ್ಕೂ ಹೆಚ್ಚು ಜನರಲ್ಲಿ ಕಪ್ಪು ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸೋಮವಾರ ಮಾಧ್ಯಮ‌ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, 300ಕ್ಕೂ ಹೆಚ್ಚು ಮಂದಿ ಕಪ್ಪು ಶಿಲೀಂಧ್ರ ಸೋಂಕಿತರು ಇದ್ದಾರೆ ಎಂದು ಪ್ರಾಥಮಿಕ ವರದಿ ಬಂದಿದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಇದೆ. 17 ಮೆಡಿಕಲ್ ಕಾಲೇಜುಗಳಲ್ಲಿ ಕೂಡ ವ್ಯವಸ್ಥೆ ಇದೆ. ಆದರೆ ಔಷಧಿ ಸ್ವಲ್ಪ ಕೊರತೆ ಇದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ ಎಂದರು.

ಇಡೀ ದೇಶದಲ್ಲಿ ವರ್ಷಕ್ಕೆ 100-200 ರಷ್ಟು ಜನರು ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗುತ್ತಿದ್ದರು. ಈಗ ರಾಜ್ಯದಲ್ಲೇ 300ಕ್ಕೂ ಅಧಿಕ ಸೋಂಕಿತರಿರುವಾಗ ಔಷಧಿ ಕೊರತೆ ಕಂಡುಬರುತ್ತದೆ. ಇದಕ್ಕಾಗಿ ಔಷಧ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. 1 ಸಾವಿರಕ್ಕೂ ಅಧಿಕ ವೈಲ್ಕಳುಹಿಸಿಕೊಡುವ ನಿರೀಕ್ಷೆಯೂ ಇದೆ. ಕಪ್ಪು ಶಿಲೀಂಧ್ರ ರೋಗಕ್ಕೆ 1,150 ವೈಲ್ ಔಷಧಿ ರಾಜ್ಯಕ್ಕೆ ದೊರೆತಿದೆ. 20 ಸಾವಿರ ವೈಲ್‌ಗೆ ಬೇಡಿಕೆ ಇಡಲಾಗಿದೆ* ಎಂದರು.

ADVERTISEMENT

ಈ ಸೋಂಕು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಲು ಸಮಿತಿ ರಚಿಸಿದ್ದು, ಈ ಸಮಿತಿ ವರದಿ ನೀಡಿದೆ. ಸ್ಟೀರಾಯಿಡ್ ಜೊತೆಗೆ ಹ್ಯುಮಿಡಿಫೈರ್ ನಲ್ಲಿ ನಲ್ಲಿ ನೀರು ಬಳಕೆ, ಐಸಿಯು ವೆಂಟಿಲೇಟರ್ ಅನ್ನು ಇನ್ನೊಬ್ಬರಿಗೆ ಬಳಸುವಾಗ, ಒಂದೇ ಮಾಸ್ಕ್ ದೀರ್ಘಕಾಲ ಬಳಕೆ, ಟ್ಯೂಬ್, ಹಾಸಿಗೆ ಮೊದಲಾದ ಮೂಲಗಳಿಂದ ಸೋಂಕು ಬರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ತಡೆಗಟ್ಟುವ ಬಗೆಯನ್ನೂ ಇದರಲ್ಲಿ ತಿಳಿಸಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಕಟ್ಟಡ ನವೀಕರಣ ಕಾಮಗಾರಿ ನಡೆಸಬಾರದು, ಹೊರಗಿನವರು ವಾರ್ಡ್‌ಗೆ ಬರಬಾರದು, ಪ್ರತಿ ಪಾಳಿ ಮುಗಿದ ಮೇಲೆ ಸ್ವಚ್ಛತೆ ಮಾಡಬೇಕು, ಪ್ರತಿ ಉಪಕರಣಗಳನ್ನು ಸ್ವಚ್ಛವಾಗಿಡಬೇಕು ಎಂದು ಸೂಚಿಸಲಾಗಿದೆ ಎಂದರು.

ಕೋವಿಡ್‌ನಿಂದ ಗುಣಮುಖರಾದಾಗ ಇಎನ್‌ಟಿ ವೈದ್ಯರು ಮತ್ತೆ ತಪಾಸಣೆ ಮಾಡಬೇಕು. 3, 7, 21 ನೇ ದಿನ ತಪಾಸಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಆಶಾ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ವೇತನ ಪಾವತಿಸಲಾಗಿದೆ. ವೇತನ ಹೆಚ್ಚಳಕ್ಕೆ ಸಂಬಂಧಿಸಿದ ವಿಚಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಚರ್ಚಿಸಲಾಗುವುದು. 10 ಲಕ್ಷಕ್ಕೂ ಅದಿಕ ಪಿಪಿಇ ಕಿಟ್ ನಮ್ಮ ಬಳಿ ಇದೆ. ಈ ವಸ್ತುಗಳ ಗುಣಮಟ್ಟದ ಬಗೆಗಿನ ಆರೋಪ ಸುಳ್ಳು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.