ADVERTISEMENT

ಇಂಥದೊಂದು ದೊಡ್ಡ ಹುದ್ದೆ ಸಿಗುತ್ತದೆಂದು ನಿರೀಕ್ಷಿಸಿರಲಿಲ್ಲ: ಪ್ರೊ.ಸಾಬಣ್ಣ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 12:49 IST
Last Updated 22 ಜುಲೈ 2020, 12:49 IST
ಪ್ರೊ.ಸಾಬಣ್ಣ ತಳವಾರ
ಪ್ರೊ.ಸಾಬಣ್ಣ ತಳವಾರ   

ಬೆಳಗಾವಿ: ‘ಇಂಥದೊಂದು ದೊಡ್ಡ ಹುದ್ದೆ ಸಿಗುತ್ತದೆಂದು ನಿರೀಕ್ಷೆ ಮಾಡಿರಲಿಲ್ಲ. ಹೆಚ್ಚಿನ ಸಮಾಜ ಸೇವೆ ಮಾಡಲು ಸರ್ಕಾರ ನನಗೆ ಅವಕಾಶ ಕೊಟ್ಟಿರುವುದಕ್ಕೆ ಬಹಳ ಖುಷಿಯಾಗಿದೆ’ ಎಂದು ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡಿರುವ ಪ್ರೊ.ಸಾಬಣ್ಣ ತಳವಾರ ಹೇಳಿದರು.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ನನ್ನನ್ನು ನಾಮನಿರ್ದೇಶನ ಮಾಡುವ ಮೂಲಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ (ಆರ್‌ಸಿಯು) ಪ್ರಾತಿನಿಧ್ಯ ನೀಡಿದೆ. ಶಿಕ್ಷಣ ಕ್ಷೇತ್ರದ ಸುಧಾರಣೆ ನಿಟ್ಟಿನಲ್ಲಿ ನನ್ನ ಕೈಲಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

‘ಹಿಂದುಳಿದ ವರ್ಗಗಳ ಸಂಘಟನೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದನ್ನು ಸರ್ಕಾರ ಗುರುತಿಸಿದೆ. ಪಕ್ಷದ ಕೆಲವರು ನನ್ನಿಂದ ಮಾಹಿತಿ ಪಡೆದಿದ್ದರು. ಆದರೆ, ಯಾಕೆ ಎನ್ನುವುದು ಗೊತ್ತಿರಲಿಲ್ಲ’ ಎಂದು ಹೇಳಿದರು.

ಪರಿಚಯ: ಕಲಬುರ್ಗಿಯ ಶಹಾಬಾದ್‌ನವರಾದ ಸಾಬಣ್ಣ ‘ಕೋಲಿ ಕಬ್ಬಲಿಗ’ ಸಮಾಜದವರು. ಎಂ.ಎ., ಪಿಎಚ್‌ಡಿ ಮಾಡಿದ್ದಾರೆ. ಒಟ್ಟು 28 ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ. ಕುಲಬುರ್ಗಿ ಜಿಲ್ಲೆಯ ಸೇಡಂ, ಚಿತ್ತಾಪುರ ತಾಲ್ಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೆಲಸ ಮಾಡಿದ್ದಾರೆ. 1997ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೇಮಕವಾದರು. ಆರ್‌ಸಿಯು ಸ್ಥಾಪನೆಯಾದಾಗ ಇಲ್ಲಿ ಉಳಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿದ್ದಾರೆ. ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.