ADVERTISEMENT

ಬರ: ಸರ್ಕಾರದ ಮೇಲೆ ಬಿಎಸ್‌ವೈ ಪ್ರಹಾರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 19:44 IST
Last Updated 11 ಡಿಸೆಂಬರ್ 2018, 19:44 IST
ಬಿ.ಎಸ್.ಯಡಿಯೂರಪ್ಪ ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದರು
ಬಿ.ಎಸ್.ಯಡಿಯೂರಪ್ಪ ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದರು   

ಬೆಳಗಾವಿ: ಬರದ ಸಮಸ್ಯೆಗೆ ಸ್ಪಂದಿಸುವಲ್ಲಿ ಮೈತ್ರಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಮಂಗಳವಾರ ಸರ್ಕಾರದ ಮೇಲೆ ಪ್ರಹಾರ ನಡೆಸಿದರು.

ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಅಂಕಿ ಅಂಶಗಳ ಸಹಿತ ಎಳೆ ಎಳೆಯಾಗಿ ಬಿಡಿಸಿಟ್ಟ ಅವರು, ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಬಿಸಿ
ಮುಟ್ಟಿಸಿದರು. ‘100 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರವೇ ಪ್ರಕಟಿಸಿದೆ. ಮತ್ತೆ 20 ತಾಲ್ಲೂಕುಗಳಲ್ಲಿ ಭೀಕರ ಪರಿಸ್ಥಿತಿ ಇದೆ. ಆದರೆ, ರಾಜ್ಯ ಸರ್ಕಾರ ಇದರ ಬಗ್ಗೆ ಗಮನವೇ ಹರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ
ಜತೆ ಸಭೆ ನಡೆಸಿಲ್ಲ. ಬರ ಪರಿಸ್ಥಿತಿ ನಿರ್ವಹಣೆಗೆ ಪ್ರತಿ ಕ್ಷೇತ್ರಕ್ಕೆ ₹50 ಲಕ್ಷ ನೀಡಲಾಗಿದೆ ಎಂದು ಕಂದಾಯ ಸಚಿವರು ಹೇಳಿಕೊಳ್ಳುತ್ತಿದ್ದಾರೆ. ಅದರಲ್ಲಿ ₹10 ಲಕ್ಷವೂ ಖರ್ಚಾಗಿಲ್ಲ. ಅದನ್ನು ಹಳೆ ಬಿಲ್‌ಗಳ ಪಾವತಿಗೆ ಬಳಸಲಾಗಿದೆ’ ಎಂದು ದೂರಿದರು.

ಜೆಡಿಎಸ್‌ ಪ್ರಣಾಳಿಕೆಯಲ್ಲಿ ಹತ್ತಾರು ಭರವಸೆಗಳನ್ನು ನೀಡಲಾಗಿತ್ತು. ಅದು ಸುಳ್ಳು ಪ್ರಣಾಳಿಕೆ. 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಘೋಷಿಸಿದ್ದರು. 6 ತಿಂಗಳು ಕಳೆದರೂ ಸಾಲ ಮನ್ನಾ ಆಗಿಲ್ಲ. ನಾಲ್ಕು ವರ್ಷಗಳ
ಅವಧಿಯಲ್ಲಿ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉತ್ತರಿಸಿದ್ದಾರೆ. ಇನ್ನೊಂದೆಡೆ, ಸರ್ಕಾರದ ಮಾತನ್ನು ನಂಬಿ ಸಾಲದ ಕಂತನ್ನು ತುಂಬಿಲ್ಲ. ಅವರ ಸಾಲದ ಕಂತು ಬೆಟ್ಟದಂತೆ ಏರುತ್ತಿದೆ. ಅವರಿಗೆ ಹೊಸ ಸಾಲ ಸಿಗುತ್ತಿಲ್ಲ. ಜಿಲ್ಲಾ ಸಹಕಾರ ಬ್ಯಾಂಕ್‌ಗಳು ದಿವಾಳಿಯಾಗಿವೆ. ಸಾಲ ಮನ್ನಾ ಯೋಜನೆಯಲ್ಲಿ 52 ಷರತ್ತುಗಳನ್ನು ವಿಧಿಸಲಾಗಿದೆ. ಈ ಯೋಜನೆಯಿಂದ ಕಡಿಮೆ ಜನರಿಗೆ ಅನುಕೂಲವಾಗಲಿದೆ’ ಎಂದು ಬೆಳಕು ಚೆಲ್ಲಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.