ADVERTISEMENT

ಬೆಂಗಳೂರು: ಬಿಬಿಎಂಪಿಗೆ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 16:18 IST
Last Updated 1 ಫೆಬ್ರುವರಿ 2024, 16:18 IST
<div class="paragraphs"><p>&nbsp;ಬಿಬಿಎಂಪಿ</p></div>

 ಬಿಬಿಎಂಪಿ

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಬೆಂಗಳೂರು ಸುತ್ತಲಿನ 110 ಹಳ್ಳಿಗಳಲ್ಲಿ ಬಿಟ್ಟು ಹೋಗಿರುವ ಪ್ರದೇಶಗಳಿಗೆ ಬೆಂಗಳೂರು ಜಲಮಂಡಳಿಯಿಂದ ₹248 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 110 ಹಳ್ಳಿಗಳಲ್ಲಿ ಬಿಟ್ಟು ಹೋಗಿರುವ ಮತ್ತು ಹೊಸದಾಗಿ ಸೇರ್ಪಡೆಗೊಂಡಿರುವ ಪ್ರದೇಶಗಳಿಗೆ ಪೂರ್ಣ ಪ್ರಮಾಣದಲ್ಲಿ  ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ADVERTISEMENT

ಈ ಯೋಜನೆ ಅನುಷ್ಠಾನಗೊಳಿಸಲು ಶೇ 50ರಷ್ಟು ಸಾಲವನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ಪಡೆಯಲಾಗುವುದು. ಉಳಿದ ಶೇ 50ರಷ್ಟು ಬಾಕಿ ಮೊತ್ತವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆಂತರಿಕ ಆರ್ಥಿಕ ಸಂಪನ್ಮೂಲದಿಂದ ಭರಿಸಲಾಗುವುದು ಎಂದರು.

ಕೆ.ಸಿ.ಜನರಲ್ ಆಸ್ಪತ್ರೆ ಉನ್ನತೀಕರಣ: ನಗರದ ಕೆ.ಸಿ.ಜನರಲ್‌ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಶವಾಗಾರ, ಅಡುಗೆ ಮನೆ, ಲಾಂಡ್ರಿ ಕಟ್ಟಡಗಳನ್ನು ನಿರ್ಮಿಸುವ ಮತ್ತು ಎಸ್‌ಟಿಪಿ ಉನ್ನತೀಕರಿಸುವ ಕಾಮಗಾರಿಗಳಿಗೆ ₹150 ಕೋಟಿ ಅಂದಾಜು ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.

ಮಳೆ ನೀರು ಕಾಲುವೆ ಪುನರ್‌ ನಿರ್ಮಾಣ: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೃಹತ್‌ ಮಳೆ ನೀರು ಕಾಲುವೆಗಳ ಪುನರ್‌ ನಿರ್ಮಾಣ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಳ್ಳಲು ಅನುಮೋದನೆ. ಮುಂಗಾರಿನಲ್ಲಿ ಮಳೆಯಿಂದ ಆಗಬಹುದಾದ ಹಾನಿಯನ್ನು ತಡೆಗಟ್ಟಲು ಶಾಶ್ವತವಾದ ಆರ್‌ಸಿಸಿ ತಡೆಗೋಡೆ ನಿರ್ಮಾಣಕ್ಕಾಗಿ ₹30 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ.

ವೈಟ್‌ ಟಾಪಿಂಟ್‌ಗೆ ₹1,200 ಕೋಟಿ ಕ್ರಿಯಾ ಯೋಜನೆಗೆ ಸಂಪುಟ ಒಪ್ಪಿಗೆ

ಬಿಬಿಎಂಪಿ ವ್ಯಾಪ್ತಿಯಲ್ಲಿ  ಪ್ರಮುಖ ರಸ್ತೆಗಳನ್ನು ವೈಟ್‌ ಟಾಪಿಂಗ್‌ ರಸ್ತೆಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ನೀಡಿರುವ ₹800 ಕೋಟಿಗಳ ಜತೆಗೆ ಬಿಬಿಎಂಪಿ ವತಿಯಿಂದ ₹400 ಕೋಟಿ ಸೇರಿಸಿ ಒಟ್ಟು ₹1,200 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಬಿಬಿಎಂಪಿ ಆಸ್ತಿ ತೆರಿಗೆಯ ಮೂಲಕ ಸ್ವಂತ ಸಂಪನ್ಮೂಲವನ್ನು ಹೆಚ್ಚಿಸಿಕೊಂಡು, ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹಣೆಯ ಮೊತ್ತವನ್ನು ಮೂಲಸೌಕರ್ಯ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುವುದು ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಮೇಲ್ಸೇತುವೆಗೆ ₹263 ಕೋಟಿ: ಬೈಯ್ಯಪ್ಪನ ಹಳ್ಳಿ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ ಅನ್ನು ಸಂಪರ್ಕಿಸಲು ₹263 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ ತಲುಪಲು ಸರಿಯಾದ ಮೆಟ್ರೊ ಮತ್ತು ರಸ್ತೆಗಳ ಸಂಪರ್ಕವಿಲ್ಲದೇ ಇರುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನಾನುಕೂಲ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಮೇಲ್ಸೇತುವೆಯಿಂದ ಈ ಸಮಸ್ಯೆ ನಿವಾರಣೆ ಆಗಲಿದೆ ಎಂದು ಪಾಟೀಲ ತಿಳಿಸಿದರು.

ಮುಂದೂಡಿಕೆಯಾದ ವಿಷಯಗಳು:

*ಚಿಕ್ಕಬಳ್ಳಾಪುರ ನಂದಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ, ವಿದ್ಯಾರ್ಥಿಗಳ ಹಾಸ್ಟೆಲ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಸತಿ ನಿಲಯಗಳ ಕಟ್ಟಡ ಕಾಮಗಾರಿಗಳ ₹810 ಕೋಟಿ ಪರಿಷ್ಕೃತ ಅಂದಾಜಿನ ಪ್ರಸ್ತಾಪವನ್ನು ಮುಂದೂಡಲಾಗಿದೆ.

*ಕೆಜಿಎಫ್‌ನ ಭಾರತ್‌ ಚಿನ್ನದ ಗಣಿ ಸಂಸ್ಥೆಯ ಗಣಿ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದು, ಕೋಲಾರ ಜಿಲ್ಲೆಯಲ್ಲಿ ಲಭ್ಯವಿರುವ ಟೈಲಿಂಗ್‌ ಡಂಪಿಂಗ್‌ಗಳಿಗೆ ಕೇಂದ್ರ ಸರ್ಕಾರದಿಂದ ಗಣಿ ಚಟುವಟಿಕೆ ನಡೆಸುವ ಪ್ರಸ್ತಾವನೆಯ ವಿಷಯವನ್ನೂ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.