ADVERTISEMENT

ಕುಡಿಯುವ ನೀರಿಗೆ ಕೃಷಿ ಹೊಂಡವೇ ಆಸರೆ

ದಟ್ಟ ಮಲೆನಾಡಿನ ಗ್ರಾಮಗಳಲ್ಲೂ ಬತ್ತಿದ ನೀರಿನ ಸೆಲೆ, ಕಾಡು ನಾಶ

ಚಂದ್ರಹಾಸ ಹಿರೇಮಳಲಿ
Published 18 ಮೇ 2019, 20:01 IST
Last Updated 18 ಮೇ 2019, 20:01 IST
ಕೃಷಿ ಹೊಂಡದಿಂದ ನೀರು ತುಂಬಿಕೊಳ್ಳುತ್ತಿರುವ ಕಾನಗೋಡು ಗ್ರಾಮಸ್ಥರು
ಕೃಷಿ ಹೊಂಡದಿಂದ ನೀರು ತುಂಬಿಕೊಳ್ಳುತ್ತಿರುವ ಕಾನಗೋಡು ಗ್ರಾಮಸ್ಥರು   

ಶಿವಮೊಗ್ಗ:ದಟ್ಟ ಕಾನನದ ಮಧ್ಯೆ ಅಲ್ಲಲ್ಲಿ ಚದುರಿಕೊಂಡಿರುವ ಮಲೆನಾಡಿನ ಸಾಂಪ್ರದಾಯಿಕ ಮನೆಗಳ ಪುಟ್ಟ ಗ್ರಾಮ ಕಾನಗೋಡು. 200 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಗ್ರಾಮದಲ್ಲಿ ಇದೇ ಮೊದಲ ಬಾರಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.

ಹೊಸನಗರ ತಾಲ್ಲೂಕು ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದ ಸರಹದ್ದಿನಲ್ಲಿ 30 ಮನೆಗಳಿವೆ. 150ಕ್ಕೂ ಹೆಚ್ಚು ಜನಸಂಖ್ಯೆ ಇದೆ. ವರ್ಷದ 365 ದಿನವೂ ಹರಿಯುವ ನದಿ, ಝರಿ, ತೊರೆಗಳ ಮಧ್ಯೆ ಇರುವ ಈ ಪ್ರದೇಶದಲ್ಲಿ ಬೇಸಿಗೆಯಲ್ಲೂ ನೀರಿನ ಸೆಲೆಗಳು ಬತ್ತಿದ ಉದಾಹರಣೆಯೇ ಇಲ್ಲ. ಈಗ ಎರಡು ತಿಂಗಳಿನಿಂದ ನೀರಿನ ಮೂಲಗಳು ಬರಿದಾಗಿವೆ. ಗ್ರಾಮದ ಸಮೀಪವೇ ಹರಿಯುವ ಕುಮದ್ವತಿ ನದಿ ಸೇರಿ ಹಳ್ಳಕೊಳ್ಳಗಳೂ ಬತ್ತಿಹೋಗಿವೆ. ಕುಡಿಯುವ ನೀರಿಗಾಗಿಯೇ ಸರ್ಕಾರ ತೆಗೆಸಿದ್ದ ಬಾವಿ, ಮನೆ–ತೋಟಗಳ ಮಧ್ಯೆ ಇರುವ ಖಾಸಗಿ ಬಾವಿಗಳಲ್ಲೂ ಹನಿ ನೀರಿಲ್ಲ. ಎಲ್ಲ ಬಾವಿಗಳೂ ಏಕಕಾಲಕ್ಕೆ ಬತ್ತಿಹೋಗಿವೆ. ಕುಡಿಯುವ ನೀರಿಗೆ ನಿತ್ಯವೂ ಜನ ಪರದಾಡುತ್ತಿದ್ದಾರೆ.

ನೀರಿಗೆ ಕೃಷಿ ಹೊಂಡವೇ ಆಸರೆ: ಗ್ರಾಮದ ಕೃಷ್ಣಮೂರ್ತಿ ಅವರು ಒಣಗುತ್ತಿರುವ ತಮ್ಮ ಅಡಿಕೆ ತೋಟ ಉಳಿಸಿಕೊಳ್ಳಲು ತೋಟದ ಮಧ್ಯೆ ಪುಟ್ಟ ಕೃಷಿ ಹೊಂಡ ತೋಡಿದ್ದಾರೆ. ಈ ಹೊಂಡಕ್ಕೆ ದೂರದ ಹೊಗಳಿಕಮ್ಮನ ಕೆರೆಯಿಂದ ಪೈಪ್‌ಲೈನ್ ಮೂಲಕ ನೀರು ತರುತ್ತಿದ್ದಾರೆ. ಸದ್ಯಕ್ಕೆ ಗ್ರಾಮದ ಜನರಿಗೆ ಈ ನೀರೇ ಆಸರೆ. ತೋಟಕ್ಕೆ ನೀರು ಹಾಯಿಸುವ ಮುನ್ನ ಜನ ಗುಂಪಾಗಿ ಬಂದು ನೀರು ತುಂಬಿಕೊಳ್ಳುತ್ತಾರೆ.

ADVERTISEMENT

ಕೆರೆ ನೀರಿಗಾಗಿ ಠಾಣೆ ಮೆಟ್ಟಿಲು ಏರಿದರು: ಕೃಷ್ಣಮೂರ್ತಿ ಅವರ ಕೃಷಿ ಹೊಂಡಕ್ಕೆ ನೀರು ಪೂರೈಸುವ ಹೊಗಳಿಕಮ್ಮನ ಕೆರೆಯೂ ಸಂಘರ್ಷದ ತಾಣವಾಗಿದೆ. ಕಳಸೆ ಗ್ರಾಮದ ಬಳಿ ಇರುವ ಈ ಕೆರೆ 27 ಎಕರೆ ವಿಸ್ತೀರ್ಣ ಹೊಂದಿದೆ. ಕಳೆದ ಮುಂಗಾರಿನಲ್ಲಿ ಸಾಕಷ್ಟು ನೀರು ಬಂದಿತ್ತು. ಈ ಕೆರೆ ಸುತ್ತಲ ಗ್ರಾಮಗಳಾದ ತಮಡಿಕೊಪ್ಪ, ತಳಲೆ, ಕಾನಗೋಡು ಭಾಗದ 250ಕ್ಕೂ ಹೆಚ್ಚು ಎಕರೆಗೆ ನೀರುಣಿಸುತ್ತದೆ. ಅರಣ್ಯ ನಾಶ, ಬಗರ್‌ಹುಕುಂ ಸಾಗುವಳಿ ಪರಿಣಾಮ ಉಳುಮೆ ಭೂಮಿ ಹೆಚ್ಚಾಗಿದೆ. ಕೆಲವರು ಕೆರೆಗೇ ಮೋಟರ್ ಇಟ್ಟು ನೀರು ಎತ್ತುತ್ತಾರೆ. ಇದರಿಂದ ಖಾತೆ ಜಮೀನುಗಳಿಗೂ ನೀರು ಹರಿಯುತ್ತಿಲ್ಲ. ರೈತರ ನಡುವೆಯೇ ನೀರಿಗಾಗಿ ಹೊಡೆದಾಟ ನಡೆದಿವೆ. ಹಲವು ಬಾರಿ ಪೊಲೀಸ್ ಠಾಣೆ ಮಟ್ಟಿಲೂ ಏರಿದ್ದಾರೆ. ಸದ್ಯ ಕೆರೆಯಲ್ಲಿ 10ರಿಂದ 12 ದಿನಕ್ಕೆ ಆಗುವಷ್ಟು ನೀರಿದೆ. ಕುಡಿಯುವ ನೀರು, ತೋಟ ಉಳಿಸಿಕೊಳ್ಳುವ ಸವಾಲಿನ ಮಧ್ಯೆ ಜನರು ಇದ್ದಾರೆ.

ಮಲೆನಾಡಿನಲ್ಲೇ ಜಲಕ್ಷಾಮ!

ಕಾನಗೋಡು ಗ್ರಾಮದ ಚಿತ್ರಣ ಒಂದು ಉದಾಹರಣೆ ಅಷ್ಟೆ. ಇಂದು ಇಡೀ ಮಲೆನಾಡಿನ ಸ್ಥಿತಿ ಅದೇ ರೀತಿ ಇದೆ. ಅತಿ ಹೆಚ್ಚು ಮಳೆ ಬೀಳುವ ಆಗುಂಬೆ ಸಮೀಪದ ಮಲ್ಲಂದೂರು ಒಂದು ಕಾಲದಲ್ಲಿ ನಕ್ಸಲ್‌ಪೀಡಿತ ಪ್ರದೇಶ. ಅಲ್ಲಿ ನೂರಾರು ಅಡಿ ಆಳವಿರುವ ಬಾವಿಗಳೂ ಬರಿದಾಗಿವೆ. ನೀರಿಗಾಗಿ ಜನರು ಐದಾರು ಮೈಲು ಸುತ್ತುತ್ತಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಸಿಂಗನಬಿದರೆ, ತೋಟದಕೊಪ್ಪ, ಕಲ್ಲುಕೊಪ್ಪ, ದೇಮಲಾಪುರ, ಕಲ್ಲತ್ತಿ, ಕುಡುಮಲ್ಲಿಗೆ, ಹೊಸನಗರ ತಾಲ್ಲೂಕು ಬಿದರಹಳ್ಳಿ, ಕಲ್ಲೂರು, ಹಾರೋಹಿತ್ತಲು, ಬುಕ್ಕಿಹೊರೆ, ಹುಂಚದ ಕಟ್ಟೆ, ಮಸಗಲ್ಲಿ, ಪುಣಜೆ, ತ್ಯಾನಂದರು, ಆಯನೂರು ಗ್ರಾಮಗಳಲ್ಲಿ ಜನರು ಕಲುಷಿತ ನೀರನ್ನೇ ಸೋಸಿ ಕುಡಿಯುತ್ತಿದ್ದಾರೆ. ಕೆಲವು ಗ್ರಾಮಗಳಿಗೆ ಅಲ್ಲಿನ ಪಂಚಾಯಿತಿಗಳು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.