ADVERTISEMENT

ನಾಳೆಯಿಂದ ಮದ್ಯ ಮಾರಾಟ ಶುರು: ರಾಜ್ಯ ಸರ್ಕಾರ ಅನುಮತಿ

​ಪ್ರಜಾವಾಣಿ ವಾರ್ತೆ
Published 2 ಮೇ 2020, 20:50 IST
Last Updated 2 ಮೇ 2020, 20:50 IST
   

ಬೆಂಗಳೂರು: ನಿರ್ಬಂಧಿತ (ಕಂಟೈನ್‌ಮೆಂಟ್‌) ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸೋಮವಾರದಿಂದ (ಮೇ 4) ಬೆಳಿಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಈ ಬಗ್ಗೆ ಶನಿವಾರ ಆದೇಶ ಹೊರಡಿಸಿರುವ ಅಬಕಾರಿ ಆಯುಕ್ತ ಎಂ. ಲೋಕೇಶ್, ‘ಕೇವಲ ಸಿಎಲ್ 2 (ಚಿಲ್ಲರೆ ಮದ್ಯದಂಗಡಿಗಳು ಅಂದರೆ ವೈನ್‌ಶಾಪ್‌ಗಳು, ಎಂಆರ್‌ಪಿ ಔಟ್‌ಲೆಟ್‌ಗಳು) ಮತ್ತು ಸಿಎಲ್‌ 11– ಸಿ (ಎಂಎಸ್‌ಐಎಲ್‌ ಮದ್ಯದಂಗಡಿಗಳು) ಮಾತ್ರ ಮದ್ಯ ಮಾರಾಟ ಮಾಡಬಹುದು. ಆದರೆ, ಈ ಮದ್ಯದಂಗಡಿಗಳು ಮಾಲ್‌ ಅಥವಾ ಸೂಪರ್‌ ಮಾರ್ಕೆಟ್‌ಗಳಲ್ಲಿ ಇದ್ದರೆ ಅಲ್ಲಿ ಮಾರಾಟಕ್ಕೆ ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಮದ್ಯ ಪೂರೈಸುವ ಕರ್ನಾಟಕ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ಕೂಡಾ ಕೆಲಸ ಆರಂಭಿಸಲಿದೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಮದ್ಯದಂಗಡಿಗಳಿಗೆ ಗುಂಪಾಗಿ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಒಂದು ಸಲಕ್ಕೆ 5 ಮಂದಿ ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರತಿಯೊಬ್ಬರ ಮಧ್ಯೆ ಆರು ಅಡಿ ಅಂತರ ಇರಬೇಕು. ಅವರ ಖರೀದಿ ಮುಗಿದ ಬಳಿಕ ಉಳಿದವರಿಗೆ ಅವಕಾಶ ಇರುತ್ತದೆ. ಮದ್ಯದಂಗಡಿಗಳ ನೌಕರರು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಮಾರಾಟ ಸ್ಥಳದಲ್ಲಿ ಸಾನಿಟೈಸರ್‌ ಬಳಸಬೇಕು.

‘ಆದೇಶದಲ್ಲಿರುವ ಷರತ್ತುಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ಮದ್ಯದಂಗಡಿಗಳ ಪರವಾನಗಿ ಅಮಾನತು ಅಥವಾ ರದ್ದುಪಡಿಸಲಾಗುವುದು’ ಎಂದೂ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.