ADVERTISEMENT

ಗ್ರಾಮೀಣ ರಸ್ತೆ ಗುಣಮಟ್ಟ ಅಧ್ಯಯನಕ್ಕೆ ಡ್ರೋನ್‌ ಬಳಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:00 IST
Last Updated 3 ಜುಲೈ 2019, 20:00 IST
   

ಬೆಂಗಳೂರು: ರಾಜ್ಯದ ಸುಮಾರು 20 ಸಾವಿರ ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳ ಗುಣಮಟ್ಟದ ಅಧ್ಯಯನಕ್ಕಾಗಿ ಡ್ರೋನ್‌ ಬಳಸಲು ಸರ್ಕಾರ ಚಿಂತನೆ ನಡೆಸಿದೆ.

ಡ್ರೋನ್‌ ಬಳಸುವುದರಿಂದ ಎಲ್ಲೆಲ್ಲಿ ರಸ್ತೆಯನ್ನು ದುರಸ್ತಿ ಮಾಡಬೇಕು ಎಂಬುದರ ನಿಖರ ಮಾಹಿತಿ ಸಿಗಲಿದೆ. ‘ಗ್ರಾಮೀಣ ಸಮಗ್ರ’ ಯೋಜನೆಯಡಿರಸ್ತೆಗಳ ನಿರ್ವಹಣೆಗೆಂದು ₹7,182 ಕೋಟಿ ನಿಗದಿ ಮಾಡಿದ್ದು, ಈ ಹಣದಲ್ಲಿ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು.

‘ರಸ್ತೆಗಳ ಗುಣಮಟ್ಟ ಪರಿಶೀಲನೆಗೆ ಡ್ರೋನ್‌ ಬಳಸಲು ಪರಿಶೀಲನೆ ನಡೆಸುತ್ತಿದ್ದೇವೆ. ಅಲ್ಲದೆ, ಸೆನ್ಸರ್‌ ಅಳವಡಿಸಿದ ವಾಹನಗಳನ್ನು ಬಳಸಲೂ ಚಿಂತನೆ ನಡೆಸಿದ್ದೇವೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈವರೆಗೆ ರಸ್ತೆಯ ಗುಣಮಟ್ಟ ವೀಕ್ಷಿಸಿ ವರದಿ ನೀಡಲು ಸಿಬ್ಬಂದಿ ಸ್ಥಳಕ್ಕೆ ಹೋಗುತ್ತಿದ್ದರು. ಬಹುತೇಕ ಸಂದರ್ಭಗಳಲ್ಲಿ ಅವರು ನಿಖರ ಮಾಹಿತಿಗಳನ್ನು ನೀಡುತ್ತಿರಲಿಲ್ಲ. ವರದಿ ನೀಡುವುದಕ್ಕೆ ಮೊದಲು ಸ್ಥಳಕ್ಕೆ ಹೋಗುತ್ತಿದ್ದರೊ ಇಲ್ಲವೊ ಎಂಬುದು ಖಚಿತವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿ ಹೊಸ ತಂತ್ರಜ್ಞಾನದ ನೆರವು ಪಡೆಯಲು ಇಲಾಖೆ ಮುಂದಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯದ ಗ್ರಾಮೀಣ ಪ್ರದೇಶವು ಒಟ್ಟು 56,362 ಕಿ.ಮಿ ರಸ್ತೆ ಜಾಲವನ್ನು ಹೊಂದಿದೆ. ಅದರಲ್ಲಿ 24,246 ರಸ್ತೆಗಳನ್ನು ಆದ್ಯತಾ ರಸ್ತೆಗಳನ್ನಾಗಿ ಗುರುತಿಸಿ ಅವುಗಳನ್ನು ಗ್ರಾಮೀಣ ಪ್ರದೇಶದ ಶಾಲೆಗಳು, ಆಸ್ಪತ್ರೆಗಳು, ಸಾರ್ವಜನಿಕ ಕಚೇರಿಗಳು ಮತ್ತು ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಲಾಗುವುದು. 4,000 ಕಿ.ಮೀ ರಸ್ತೆಗಳು ಉತ್ತಮ ಸ್ಥಿತಿಯಲ್ಲಿ ಇವೆ. ಉಳಿದ 20 ಸಾವಿರ ಕಿ.ಮೀ. ರಸ್ತೆಯ ಪುನರ್‌ ನಿರ್ಮಾಣ ಆಗಬೇಕಾಗಿದೆ.

‘ರಸ್ತೆಯಲ್ಲಿರುವ ಗುಂಡಿಗಳು, ಬಿರುಕುಗಳು, ಅಂಚಿನಲ್ಲಿ ಕಿತ್ತು ಹೋಗಿರುವುದನ್ನು ಡ್ರೋನ್‌ಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳು ಸೆರೆ ಹಿಡಿಯುತ್ತವೆ. ಬಳಿಕ ಇದಕ್ಕಾಗಿ ಸಿದ್ಧಪಡಿಸಿರುವ ಸಾಫ್ಟ್‌ವೇರ್‌, ವಿಡಿಯೊ ದೃಶ್ಯವನ್ನು ವಿಶ್ಲೇಷಣೆ ನಡೆಸಿ ರಸ್ತೆ ಗುಣಮಟ್ಟದ ಸೂಚ್ಯಂಕವನ್ನು ಸಿದ್ಧಪಡಿಸುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ತಿಳಿಸಿದರು.

ಡ್ರೋನ್‌ ಆಧಾರಿತ ಸಮೀಕ್ಷೆ ಕಾರ್ಯಸಾಧುವೇ ಎಂಬುದನ್ನು ತಿಳಿದುಕೊಳ್ಳಲು ಮಂಗಳೂರು ಮೂಲದ ಕ್ವಾಡ್‌ ಪರ್ಸೆಸ್ಪೆಕ್ಟಿವ್‌ ಸಂಸ್ಥೆಯನ್ನು ಕೋರಲಾಗಿದೆ. ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಕಾರ್ಯಕ್ಕೆ ಈ ಸಂಸ್ಥೆಯು ಡ್ರೋನ್‌ ಅನ್ನು ಬಳಸಿತ್ತು. ರಸ್ತೆ ಸಮೀಕ್ಷೆ ನಡೆಸಲು ಟೆಂಡರ್‌ ಕರೆಯಲಾಗುವುದು ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.