ADVERTISEMENT

ರಾಜ್ಯದ 24 ಜಿಲ್ಲೆಗಳ 100 ತಾಲ್ಲೂಕು ಬರಪೀಡಿತ: ₹16,662 ಕೋಟಿ ನಷ್ಟ

ನೆರವಿಗೆ ಕೇಂದ್ರ ಸರ್ಕಾರಕ್ಕೆ ಇಂದು ಮನವಿ

ರಾಜೇಶ್ ರೈ ಚಟ್ಲ
Published 28 ಅಕ್ಟೋಬರ್ 2018, 20:39 IST
Last Updated 28 ಅಕ್ಟೋಬರ್ 2018, 20:39 IST
.
.   

ಬೆಂಗಳೂರು: ಮುಂಗಾರು ಮಳೆ ಕೊರತೆಯಿಂದ ರಾಜ್ಯದ 24 ಜಿಲ್ಲೆಗಳ 100 ಬರಪೀಡಿತ ತಾಲ್ಲೂಕುಗಳಲ್ಲಿ
₹ 16,662.48 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ ದೆಹಲಿಯಲ್ಲಿ ಸೋಮವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಥಿಯಿಂದ (ಎನ್‌ಡಿಆರ್‌ಎಫ್‌) ಪರಿ
ಹಾರ ನೀಡುವಂತೆ ಮನವಿ ಸಲ್ಲಿಸಲಿದ್ದಾರೆ.

ಮುಂಗಾರು ಅವಧಿಯಲ್ಲಿ 74.69 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷಿಸಲಾಗಿತ್ತು. ಸೆಪ್ಟೆಂಬರ್‌ ಅಂತ್ಯದದವರೆಗೆ 66.36 ಲಕ್ಷ ಹೆಕ್ಟೇರ್‌ (ಶೇ 89ರಷ್ಟು) ಪ್ರದೇಶದಲ್ಲಿ ಬಿತ್ತನೆ ಆಗಿದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಬಳಿಕ, ಬರ ಪೀಡಿತ ತಾಲ್ಲೂಕುಗಳಲ್ಲಿ ತೇವಾಂಶ ಕೊರತೆಯಿಂದ 27.32 ಲಕ್ಷ ಹೆಕ್ಟೇರ್‌ (ಶೇ 41 ಬಿತ್ತನೆ ಪ್ರದೇಶ) ಹಾನಿಗೆ ಒಳಗಾಗಿರುವುದನ್ನು ಗುರುತಿಸಲಾಗಿದೆ. ಈ ಪೈಕಿ, 26.19 ಲಕ್ಷ ಹೆಕ್ಟೇರ್‌ನಲ್ಲಿ ಶೇ 33ಕ್ಕೂ ಹೆಚ್ಚು ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದೆ.

ADVERTISEMENT

ಟ್ಯಾಂಕರ್‌ ನೀರು: ಗ್ರಾಮೀಣ ಪ್ರದೇಶಗಳ 159 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 203 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ. ನಗರ ಪ್ರದೇಶಗಳಲ್ಲಿ 136 ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸ್ಥಿತಿ ಇದೇ ರೀತಿ ಮುಂದುವರಿದರೆ ಬೇಸಿಗೆಯಲ್ಲಿ ಈ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಆತಂಕ ಇದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಚಾಲ್ತಿಯಲ್ಲಿರುವ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ಧರಿಸಲಾಗಿದೆ.

ಬರಪೀಡಿತಗಳಲ್ಲಿ ತಾಲ್ಲೂಕುಗಳಲ್ಲಿ ಮೇವು ಅವಲಂಬಿಸಿದ 11.43 ಲಕ್ಷ ಜಾನುವಾರುಗಳಿವೆ. 98.26 ಲಕ್ಷ ಟನ್‌ ಒಣ ಮೇವು ಲಭ್ಯ ಇದ್ದು, ಇದು ಸುಮಾರು 16 ವಾರಗಳಿಗೆ ಮಾತ್ರ ಸಾಕಾಗಲಿವೆ. ಬರ ಸ್ಥಿತಿ ಇದೇ ರೀತಿ ಮುಂದುವರಿದರೆ, ಮೇವಿನ ಕೊರತೆ ಉಂಟಾಗ
ಲಿದೆ. ಇದನ್ನು ನಿಭಾಯಿಸಲು ಹಸಿರು ಮೇವು ಬೆಳೆಯಲು ಮೇವಿನ ಬೀಜಗಳ 8.11 ಲಕ್ಷ ಕಿಟ್‌ಗಳನ್ನು ನೀರಾವರಿ ಸೌಲಭ್ಯ ಇರುವ ರೈತರಿಗೆ ವಿತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬರ ನಿರ್ವಹಣೆ ಹಾಗೂ ವಲಸೆ ತಡೆಯಲು ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಕಾಮಗಾರಿ ಕೈಗೆತ್ತಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಸೆ. 22ರವರೆಗೆ ಬರ ಪೀಡಿತ ತಾಲ್ಲೂಕುಗಳಲ್ಲಿ 4.69 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗಿದೆ. 2.10 ಕೋಟಿ ಮಾನವ ದಿನಗಳ ಕೆಲಸ ನಡೆದಿದೆ. ಈ ಅವಧಿಯಲ್ಲಿ 6.36 ಲಕ್ಷ ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ. 2,238 ಕುಟುಂಬಗಳು 100 ದಿನಗಳ ಕೆಲಸ ಪಡೆದಿವೆ. ಇದಕ್ಕಾಗಿ 142.93 ಕೋಟಿ ವೆಚ್ಚ ಮಾಡಲಾಗಿದೆ. ಅಲ್ಲದೆ, ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ₹ 2 ಲಕ್ಷದವರೆಗಿನ ಬೆಳೆ ಸಾಲ ಮನ್ನಾ ಮಾಡಿದೆ. ಈ ಮೂಲಕ ಬೊಕ್ಕಸಕ್ಕೆ 48 ಸಾವಿರ ಕೋಟಿ ಹೊರೆಯಾಗಿದೆ ಎಂದೂ ಮೂಲಗಳು ಹೇಳಿವೆ.

ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ₹ 50 ಕೋಟಿ ಬಿಡುಗಡೆ ಮಾಡಲಾಗಿದೆ. ಬರ ಪೀಡಿತ ತಾಲ್ಲೂಕಿಗೆ ಕುಡಿಯುವ ನೀರು ಪೂರೈಕೆ ಮತ್ತು ಹಸಿರು ಮೇವು ಬೆಳೆಯಲು ₹ 5 ಲಕ್ಷದಂತೆ ಆರ್ಥಿಕ ನೆರವು ಒದಗಿಸಲಾಗಿದೆ. ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಗಳಲ್ಲಿ (‍ಪಿ.ಡಿ) ಸಾಕಷ್ಟು ಹಣ ಇರುವಂತೆ ನೋಡಿಕೊಳ್ಳಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಕುಸಿದ ಅಂತರ್ಜಲ:ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರಿ ಮಳೆಯಿಂದಾಗಿ ಜಲಾಶಯಗಳ ನೀರಿನ ಮಟ್ಟ ಉತ್ತಮವಾಗಿದೆ. ಆದರೂ 3,611 ಸಣ್ಣ ನೀರಾವರಿ ಕೆರೆಗಳ ಪೈಕಿ ಶೇ 53ರಷ್ಟು ಕೆರೆಗಳ ನೀರಿನ ಮಟ್ಟ ವಾಡಿಕೆಗಿಂತ ಕಡಿಮೆ ಇದೆ. ಇದರಿಂದ ಅಂತರ್ಜಲ ಮಟ್ಟ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.