ADVERTISEMENT

ಮಾದಕ ದ್ರವ್ಯ ನಿಯಂತ್ರಣ: ಸೆ. 30ರವರೆಗೆ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 16:09 IST
Last Updated 2 ಆಗಸ್ಟ್ 2025, 16:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

(ಎ.ಐ ಚಿತ್ರ)

ಬೆಂಗಳೂರು: ಮಾದಕ ದ್ರವ್ಯ ನಿಯಂತ್ರಣ ಉದ್ದೇಶದಿಂದ ‘ದೀನದಯಾಳ್ ಅಂತ್ಯೋದಯ’ ಯೋಜನೆಯಡಿ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಸೆ. 30ರವರೆಗೆ ರಾಜ್ಯದಾದ್ಯಂತ ‘ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.

ADVERTISEMENT

ಹೆಚ್ಚುತ್ತಿರುವ ಮಾದಕ ದ್ರವ್ಯ ದುರುಪಯೋಗ ಮತ್ತು ಅದರ ದುಷ್ಪರಿಣಾಮಗಳನ್ನು ತಡೆಯಲು ಈ ಅಭಿಯಾನ ಕೈಗೊಳ್ಳಲಾಗಿದೆ ಎಂದು ಕೌಶಲಾಭಿವೃದ್ಧಿ ಇಲಾಖೆಯ ಅಡಿಯಲ್ಲಿರುವ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕಿ ಶ್ರೀವಿದ್ಯಾ ತಿಳಿಸಿದ್ದಾರೆ.

ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು ಮತ್ತು ಇತರೆ ಸಮುದಾಯಗಳು ಈ ಅಭಿಯಾನ ನಡೆಸಲಿವೆ. ಈ ಸಂದರ್ಭದಲ್ಲಿ ಮಾದಕ ದ್ರವ್ಯ ಬಳಕೆ ಮತ್ತು ವ್ಯಸನದಿಂದ ಉಂಟಾಗುವ ಹಿಂಸೆ, ದೌರ್ಜನ್ಯ, ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಮತ್ತು ಅವುಗಳ ದುಷ್ಪರಿಣಾಮಗಳ ಬಗ್ಗೆ ಸಮುದಾಯಗಳಿಗೆ ತಿಳಿಸಲು, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

‘ಅಭಿಯಾನವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಬೀದಿ ನಾಟಕಗಳು, ಜಾಗೃತಿ ರ‍್ಯಾಲಿಗಳು, ಉಪನ್ಯಾಸಗಳು, ಕಾರ್ಯಾಗಾರಗಳು, ಕರಪತ್ರಗಳು ಮತ್ತು ಪೋಸ್ಟರ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಅಭಿಯಾನಗಳು, ಆರೋಗ್ಯ ಸಲಹಾ ಶಿಬಿರಗಳು, ಕಿರುಚಿತ್ರಗಳ ಪ್ರದರ್ಶನಗಳು ನಡೆಯಲಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.