ಬೆಂಗಳೂರು: ಡ್ರಗ್ಸ್ ಜಾಲದ ಬಂಧಿತ ಆರೋಪಿ ಅನೂಪ್‍ನೊಂದಿಗೆ ಹಣಕಾಸು ವ್ಯವಹಾರ ನಡೆಸಿರುವ ಆರೋಪದಡಿ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೇಶ್ ಕೊಡಿಯೇರಿಯನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬೆಂಗಳೂರಿನಲ್ಲಿ ಗುರುವಾರ ವಶಕ್ಕೆ ಪಡೆದಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಎನ್‍ಸಿಬಿ ಅಧಿಕಾರಿಗಳು ಬಂಧಿಸಿರುವ ಡ್ರಗ್ ಪೆಡ್ಲರ್ ಮೊಹಮ್ಮದ್ ಅನೂಪ್‍ನೊಂದಿಗೆ ಬಿನೇಶ್ ನಂಟು ಹೊಂದಿದ್ದರು. ಬೆಂಗಳೂರಿನಲ್ಲಿ ರೆಸ್ಟೋರೆಂಟ್‍ವೊಂದನ್ನು ತೆರೆಯಲು ಅನೂಪ್‍ಗೆ ಬಿನೇಶ್ ಹಣಕಾಸಿನ ನೆರವು ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಅ.6ರಂದು ವಿಚಾರಣೆಗೆ ಬರುವಂತೆ ಇಡಿ ಬಿನೇಶ್‍ಗೆ ನೋಟಿಸ್ ನೀಡಿತ್ತು.
ವಿಚಾರಣೆ ಎದುರಿಸಿದ ಬಿನೇಶ್, ಅನೂಪ್‍ಗೆ ಸ್ನೇಹಿತರಿಂದ ಹಣ ಕೊಡಿಸಿರುವುದಾಗಿ ತನಿಖಾಧಿಕಾರಿಗಳಿಗೆ ತಿಳಿಸಿದ್ದರು. ಇದಕ್ಕೆ ಸೂಕ್ತ ದಾಖಲೆ ಸಲ್ಲಿಸುವಂತೆ ಇಡಿ ಸೂಚಿಸಿತ್ತು. ಈ ಸಂಬಂಧ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ಬಿನೇಶ್ ಎರಡನೇ ಬಾರಿಯ ವಿಚಾರಣೆಗೆ ಗುರುವಾರ ಹಾಜರಾದರು. ಬಿನೇಶ್ ತಂದಿದ್ದ ದಾಖಲೆಗಳೊಂದಿಗೆ ಸತತ ನಾಲ್ಕು ಗಂಟೆಗಳ ವಿಚಾರಣೆ ಬಳಿಕ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.