ADVERTISEMENT

ಬಾಲಿವುಡ್ ನಟ ನಾಲ್ಕು ಗಂಟೆ ಪಾರ್ಟಿಗೆ ₹1.50 ಲಕ್ಷ ಪಡೆಯುತ್ತಿದ್ದ!

ಬಾಲಿವುಡ್ ನಟ ಬಿಡುಗಡೆ. ಎಲ್‌.ಎ ಪ್ರೊಡಕ್ಷನ್‌ನಿಂದ ಪಾರ್ಟಿ ಆಯೋಜನೆ?

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 19:26 IST
Last Updated 14 ಜೂನ್ 2022, 19:26 IST
ಸಿದ್ಧಾಂತ್
ಸಿದ್ಧಾಂತ್   

ಬೆಂಗಳೂರು: ‘ದಿ ಪಾರ್ಕ್’ ಪಂಚತಾರಾ ಹೋಟೆಲ್‌ನ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ಆರೋಪದಡಿ ಬಂಧಿಸಲಾಗಿದ್ದ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮಗ ಸಿದ್ಧಾಂತ್ ಸೇರಿದಂತೆ ಐವರನ್ನು ಠಾಣೆ ಜಾಮೀನು ಮೇಲೆ ಪೊಲೀಸರು ಸೋಮವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ.

ಟ್ರಿನಿಟಿ ವೃತ್ತದಲ್ಲಿರುವ ಹೋಟೆಲ್‌ನ ಬಾರ್‌ ಮೇಲೆ ಭಾನುವಾರ ರಾತ್ರಿ ದಾಳಿ ಮಾಡಿದ್ದ ಹಲಸೂರು ಪೊಲೀಸರು, 35 ಮಂದಿಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ಈ ಪೈಕಿ ಸಿದ್ಧಾಂತ್ ಕಪೂರ್, ಅಖಿಲ್ ಸೋನಿ (28), ಹರ್ಜೋ‌ತ್ ಸಿಂಗ್ (28), ಹನಿ (25) ಹಾಗೂ ಅಖಿಲ್ (23) ಅವರು ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿತ್ತು. ಇವರೆಲ್ಲರನ್ನೂ ಪೊಲೀಸರು ಬಂಧಿಸಿದ್ದರು.

‘ಪಾರ್ಟಿ ವೇಳೆ ಡ್ರಗ್ಸ್ ಪತ್ತೆಯಾಗಿದ್ದು, ಅದು ಯಾರಿಗೆ ಸೇರಿದ್ದು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ತನಿಖೆ ಮುಂದುವರಿದಿದೆ. ಎನ್‌ಡಿಪಿಎಸ್ ಕಾಯ್ದೆಯನ್ವಯ ಬಂಧಿತ ಐವರು ಆರೋಪಿಗಳನ್ನು ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದ್ದು, ವಿಚಾರಣೆ ಅಗತ್ಯವಿದ್ದರೆ ಠಾಣೆಗೆ ಬರಬೇಕೆಂದು ಸೂಚನೆ ನೀಡಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.

ADVERTISEMENT

ಪಾರ್ಟಿ ಆಯೋಜಿಸಿದ್ದ ಎಲ್‌.ಎ ಪ್ರೊಡಕ್ಷನ್: ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆ ಹೇಗಾಯಿತು ಎಂಬುದನ್ನು ತಿಳಿಯಲು ಹಲಸೂರು ಪೊಲೀಸರು ತನಿಖೆ ಮುಂದುವರಿಸಿದ್ದು, ಪಾರ್ಟಿ ಆಯೋಜಕರ ಬಗ್ಗೆಯೂ ಮಾಹಿತಿ ಕಲೆಹಾಕಿದ್ದಾರೆ.

‘ಎಲ್‌.ಎ ಪ್ರೊಡಕ್ಷನ್’ ಕಂಪನಿ ಹಾಗೂ ‘ಹಿಂದಿ ವೈಬ್’ ಹೆಸರಿನ ತಂಡ ಜಂಟಿಯಾಗಿ ಪಾರ್ಟಿ ಆಯೋಜಿಸಿದ್ದ ಮಾಹಿತಿ ಲಭ್ಯವಾಗಿದೆ. ಪಾರ್ಟಿ ಬಗ್ಗೆ ಜಾಹೀರಾತು ನೀಡಿ ಯುವಜನತೆಯನ್ನು ಆಕರ್ಷಿಸಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಟ ಸಿದ್ಧಾಂತ್ ಅವರನ್ನು ಪಾರ್ಟಿಯಲ್ಲಿ ಡಿ.ಜೆ (ಡಿಸ್ಕ್ ಜಾಕಿ) ನಿರ್ವಹಣೆಗಾಗಿ ಕರೆಸಿಕೊಳ್ಳಲಾಗಿತ್ತು. ನಾಲ್ಕು ಗಂಟೆಗಳ ಪಾರ್ಟಿಗಾಗಿ ಅವರಿಗೆ ₹ 1.50 ಲಕ್ಷ ಪಾವತಿಸಲಾಗಿತ್ತು. ಇದೇ ರೀತಿಯಲ್ಲೇ ಸಿದ್ಧಾಂತ್, ಗೋವಾ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಪಾಲ್ಗೊಂಡು ಹಣ ಸಂಪಾದನೆ ಮಾಡುತ್ತಿದ್ದರು. ಇದುವೇ ಅವರ ಸದ್ಯದ ಉದ್ಯೋಗವಾಗಿತ್ತು’ ಎಂದೂ ಮೂಲಗಳು ತಿಳಿಸಿವೆ.

‘ಪಾರ್ಟಿಗೆ ಅನುಮತಿ ಪಡೆದಿದ್ದವರ ಬಗ್ಗೆ ಹೋಟೆಲ್‌ ಮಾಲೀಕರಿಂದ ಮಾಹಿತಿ ಕೇಳಲಾಗಿದೆ. ಅವರು ನೀಡಿದ ನಂತರ, ಆಯೋಜಕರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.