ADVERTISEMENT

ಗುತ್ತಿಗೆದಾರರಿಗೆ ಹಣ ಬಾಕಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 20:22 IST
Last Updated 29 ನವೆಂಬರ್ 2023, 20:22 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಗುತ್ತಿಗೆದಾರರ ಬಾಕಿ ಹಣ ಪಾವತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಡೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ‘ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಎಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು, ಯಾಕೆ ನಿಮ್ಮ ಬಳಿ ಹಣ ಇಲ್ಲವೇ, ಬಾಕಿ ಪಾವತಿಯಲ್ಲೂ ಹಿರಿತನವೇ‘ ಎಂದು ಕಟುವಾಗಿ ಪ್ರಶ್ನಿಸಿದೆ.

‘ಬಾಕಿ ಹಣ ಪಾವತಿಗೆ ಸಂಬಂಧಿಸಿದಂತೆ ಕೋರ್ಟ್‌ ಆದೇಶ ಪಾಲನೆ ಮಾಡಿಲ್ಲ‘ ಎಂದು ಆಕ್ಷೇಪಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಮಾಗಡಿ ತಾಲ್ಲೂಕಿನ ಬಾಗಿನಗೆರೆಯ ‘ಮೆಸರ್ಸ್ ನಿಕ್ಷೇಪ ಇನ್‌ಫ್ರಾ ಪ್ರಾಜೆಕ್ಟ್’ ದಾಖಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರ ಉತ್ತರಕ್ಕೆ ಇನ್ನಿಲ್ಲದ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ನಿಮ್ಮ ದಾಖಲೆಗಳನ್ನೇ ಒಮ್ಮೆ ತೆಗೆದು ನೋಡಿ. ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಕಿ ಹಣ ಪಾವತಿಗೆ ಬಿಬಿಎಂಪಿ ಅನುಸರಿಸುತ್ತಿರುವ ವಿಧಾನವೇ ನಮಗೆ ತಿಳಿಯುತ್ತಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಟೆಂಡರ್ ಕರೆದು, ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಮೊತ್ತ ಪಾವತಿಗೆ ಷರತ್ತುಗಳನ್ನು ಒಡ್ಡುವುದು, ಅನಗತ್ಯ ವಿಳಂಬ ಮಾಡುವುದು ಎಷ್ಟರ ಮಟ್ಟಿಗೆ ಸರಿ‘ ಎಂದು ಖಾರವಾಗಿ ನುಡಿಯಿತು.

ADVERTISEMENT

‘2023ರ ಅಕ್ಟೋಬರ್ 30ರಂದು ನೀಡಿರುವ ಮಧ್ಯಂತರ ಆದೇಶದಲ್ಲೇ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಆದರೂ ಬಾಕಿ ಪಾವತಿಗೆ ಮೀನಮೇಷ ಎಣಿಸುತ್ತಿದ್ದೀರಿ. ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸದೆ ಕಚೇರಿಗೆ ಅಲೆದಾಡಿಸುವುದು ಸರಿಯೇ‘ ಎಂದು ಪ್ರಶ್ನಿಸಿತು.

ಅರ್ಜಿಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ವಾಣಿ, ಬಿಬಿಎಂಪಿ ಮಲ್ಲೇಶ್ವರ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಜೈಶಂಕರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

‘ಸ್ವಚ್ಛತೆ’ಯನ್ನು ನಿಮ್ಮ ಮನೆಯಿಂದ ಆರಂಭಿಸಿ’
‘ಒಂದು ವೇಳೆ ಸ್ವಚ್ಛತಾ ಕಾರ್ಯಾಚರಣೆ ಆರಂಭಿಸುವುದಿದ್ದರೆ ಅದನ್ನು ಮೊದಲು ನಿಮ್ಮ ಮನೆಯಿಂದ ಆರಂಭಿಸಿ’ ಎಂದು ನ್ಯಾಯಪೀಠ ಹೇಳಿತು. ವಿಚಾರಣೆ ವೇಳೆ, ಬಿಬಿಎಂಪಿ ಪರ ವಕೀಲರು ನಕಲಿ ಬಿಲ್‌ಗಳ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಕಿಡಿಕಾರಿದ ನ್ಯಾಯಪೀಠ, ‘ಅದಕ್ಕೂ ಈ ಅರ್ಜಿದಾರರಿಗೂ ಸಂಬಂಧವಿಲ್ಲ. ಇಂತಹ ವಿಷಯಗಳಲ್ಲಿ ನೀವು ನಿಮ್ಮ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಾ? ರಾಜ್ಯ ಸರ್ಕಾರ ವಿವೇಚನೆಯಿಂದ ಕಾರ್ಯ ನಿರ್ವಹಿಸಬೇಕು‘ ಎಂದು ತಾಕೀತು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.