ADVERTISEMENT

ಮದ್ಯದ ನಶೆ ಜೋರು: ಬಿಯರ್ ಪ್ರಿಯರ ಸಂಖ್ಯೆ ಏರಿಕೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 4:40 IST
Last Updated 5 ನವೆಂಬರ್ 2022, 4:40 IST
   

ಬೆಂಗಳೂರು: ಕಳೆದ ಏಳು ತಿಂಗಳ ಅವಧಿಯಲ್ಲಿ ಮದ್ಯ ಪ್ರಿಯರು ನಶೆಯಲ್ಲಿ ತೇಲಿದ್ದು, ಸರ್ಕಾರಕ್ಕೆ ₹16,948 ಕೋಟಿ ವರಮಾನ ಸಂಗ್ರಹವಾಗಿದೆ. ವಿಸ್ಕಿ, ಬ್ರಾಂದಿ ಮತ್ತು ರಮ್‌ಗಿಂತ ಬಿಯರ್ ಪ್ರಿಯರೇ ಹೆಚ್ಚಿನ ವರಮಾನ ತಂದುಕೊಟ್ಟಿದ್ದಾರೆ.

ಮದ್ಯ (ಐಎಂಎಲ್‌) ಮತ್ತು ಬಿಯರ್ ಮಾರಾಟದಲ್ಲಿ ಏರಿಕೆ ಕಂಡು ಬಂದಿದ್ದರೂ, ಬಿಯರ್ ಸೇವನೆ ಗಣನೀಯವಾಗಿ ಅಂದರೆ ಶೇ 59.66ರಷ್ಟು ಹೆಚ್ಚಾಗಿದೆ. ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದ ತನಕದ ಏಳು ತಿಂಗಳ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 80.07 ಲಕ್ಷ ಬಾಕ್ಸ್‌ ಬಿಯರ್ ಬಾಟಲಿಗಳು ಹೆಚ್ಚುವರಿಯಾಗಿ ಮಾರಾಟವಾಗಿವೆ. ಒಟ್ಟಾರೆ 214.28 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ.

ವಿಸ್ಕಿ, ಬ್ರಾಂದಿ ಮತ್ತು ರಮ್ ಸೇವನೆಯೂ ಶೇ 7.64 ರಷ್ಟು ಹೆಚ್ಚಾಗಿದೆ. ಒಟ್ಟಾರೆ 397.43 ಲಕ್ಷ ಬಾಕ್ಸ್ ಮದ್ಯ(ಐಎಂಎಲ್) ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 28.22 ಲಕ್ಷ ಬಾಕ್ಸ್‌ ಹೆಚ್ಚುವರಿ ಮದ್ಯ ಮಾರಾಟವಾಗಿದೆ.‌

ADVERTISEMENT

‘ಈ ವರ್ಷ ಮದುವೆ ಸೇರಿದಂತೆ ಕಾರ್ಯಕ್ರಮಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಮದ್ಯ ಸೇವನೆ ಕೂಡ ಹೆಚ್ಚಾಗಿದೆ. ಜತೆಗೆ ಬಹುತೇಕ ಏಳು ತಿಂಗಳಿಂದ ಮಳೆ ಸುರಿಯುತ್ತಿರುವುದರಿಂದ ವಾತಾವರಣ ತಂಪಾಗಿಯೇ ಇದೆ. ಈ ಸಂದರ್ಭದಲ್ಲಿ ಮದ್ಯದ ನಶೆ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ಮದ್ಯ ಪ್ರಿಯರು ಅಬಕಾರಿ ಇಲಾಖೆಗೆ ವರಮಾನವನ್ನೂ ಹೆಚ್ಚಿಸಿದ್ದಾರೆ’ ಎನ್ನುತ್ತಾರೆ ಮದ್ಯದ ಅಂಗಡಿ ಮಾಲೀಕರು.

ವಾರ್ಷಿಕ ₹29 ಸಾವಿರ ಕೋಟಿ ವರಮಾನ ಸಂಗ್ರಹಿಸುವ ಗುರಿಯನ್ನು ಅಬಕಾರಿ ಇಲಾಖೆ ಹೊಂದಿದ್ದು, ಈಗಾಗಲೇ ₹16,948 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷದ ಏಳು ತಿಂಗಳ ಅವಧಿಯ ವರಮಾನಕ್ಕೆ ಹೋಲಿಸಿದರೆ ₹2,333 ಕೋಟಿ ಹೆಚ್ಚುವರಿ ವರಮಾನ ಸಂಗ್ರಹವಾಗಿದೆ ಎಂದು ಅಬಕಾರಿ ಇಲಾಖೆ ಅಂಕಿ–ಅಂಶಗಳು ಹೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.