ADVERTISEMENT

ಎಪಿಎಂಸಿ ವ್ಯಾಪ್ತಿಗೆ ಇ–ಕಾಮರ್ಸ್‌: ತಿದ್ದುಪಡಿ ಮಸೂದೆಗೆ ವಿಧಾನಸಭೆಯ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 15:46 IST
Last Updated 10 ಮಾರ್ಚ್ 2025, 15:46 IST
   

ಬೆಂಗಳೂರು: ಎಲ್ಲ ಇ–ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುವ ಕೃಷಿ ಉತ್ಪನ್ನಗಳ ಮೇಲೆ ಸೆಸ್‌ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಮಸೂದೆ–2025ಕ್ಕೆ ವಿಧಾನಸಭೆ ಸೋಮವಾರ ಅಂಗೀಕಾರ ನೀಡಿತು.

ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಇ–ಪ್ಲಾಟ್‌ಫಾರ್ಮ್‌ಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ (ಎಪಿಎಂಸಿ) ಸೆಸ್‌ ಪಾವತಿ ಮಾಡುವುದು ಕಡ್ಡಾಯವಾಗಲಿದೆ. ಇ–ಪ್ಲಾಟ್‌ಫಾರ್ಮ್‌ಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ನೀಡುವ, ಸೆಸ್‌ ವಿಧಿಸಿ, ವಸೂಲಿ ಮಾಡುವ ಮತ್ತು ಪರವಾನಗಿಯನ್ನು ರದ್ದುಪಡಿಸುವ ಅಥವಾ ಅಮಾನತ್ತುಪಡಿಸುವ ಅಧಿಕಾರವು ಎಪಿಎಂಸಿ ಅಧಿಕಾರಿಗಳಿಗೆ ಲಭಿಸಲಿದೆ. ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿ, ಆದೇಶ ಹೊರಡಿಸುವ ಅಧಿಕಾರವು ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ದೊರಯಲಿದೆ.

ಮಸೂದೆ ಕುರಿತು ಸದನಕ್ಕೆ ವಿವರ ನೀಡಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ, ‘ಇ–ಪ್ಲಾಟ್‌ಫಾರ್ಮ್‌ಗಳಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡುವವರು ತೆರಿಗೆ ಪಾವತಿಸುತ್ತಿರಲಿಲ್ಲ. ಅಂತಹ ಸಂಸ್ಥೆಯೊಂದಕ್ಕೆ ಇತ್ತೀಚೆಗೆ ₹50 ಲಕ್ಷ ದಂಡ ವಿಧಿಸಲಾಗಿದೆ. ಈ ಮಸೂದೆಯಿಂದಾಗಿ ಎಲ್ಲ ಇ–ಪ್ಲಾಟ್‌ಫಾರ್ಮ್‌ಗಳು ಪರವಾನಗಿ ಪಡೆದು, ಸೆಸ್‌ ಪಾವತಿಸುವುದು ಕಡ್ಡಾಯವಾಗಲಿದೆ’ ಎಂದರು.

ADVERTISEMENT

ತಿದ್ದುಪಡಿ ಮಸೂದೆಯ ಪರಿಣಾಮವಾಗಿ, ಉಗ್ರಾಣಗಳಲ್ಲಿ (ವೇರ್‌ಹೌಸ್‌) ನಡೆಯುವ ಕೃಷಿ ಉತ್ಪನ್ನಗಳ ಮಾರಾಟದ ಮೇಲೂ ಸೆಸ್‌ ಪಾವತಿ ಕಡ್ಡಾಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.