ADVERTISEMENT

ಮಾರ್ಚ್‌ 1 ರಿಂದ ಎಲ್ಲರಿಗೂ ಇ–ಎಪಿಕ್

ಇ–ಎಪಿಕ್‌ ಪಡೆದ 23 ಸಾವಿರ ಹೊಸ ಮತದಾರರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 19:07 IST
Last Updated 11 ಫೆಬ್ರುವರಿ 2021, 19:07 IST
   

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಜನವರಿ 25 ರಿಂದ ಆರಂಭಿಸಿದ ಎಲೆಕ್ಟ್ರಾನಿಕ್‌ ಮತದಾರರ ಗುರುತಿನ ಚೀಟಿ (ಇ–ಎಪಿಕ್‌) ಅಭಿಯಾನದಡಿ ರಾಜ್ಯದಲ್ಲಿ ಈವರೆಗೆ 23,500 ಮಂದಿ ಹೊಸ ಮತದಾರರು ಇ–ಎಪಿಕ್‌ ಪಡೆದಿದ್ದಾರೆ.

ಮೊದಲ ಆದ್ಯತೆಯ ಮೇರೆಗೆ 18 ವರ್ಷ ತುಂಬಿದವರಿಗೆ ಇ–ಎಪಿಕ್‌ ನೀಡಲಾಗುತ್ತಿದೆ. ಇನ್ನೂ ಪಡೆಯದೇ ಇರುವವರು ಇದೇ ತಿಂಗಳ
ಕೊನೆಯ ಒಳಗೆ ಆನ್‌ಲೈನ್‌ ಮೂಲಕವೇ ಪಡೆಯಬಹುದಾಗಿದೆ ಎಂದು ಜಂಟಿ ಮುಖ್ಯಚುನಾವಣಾಧಿಕಾರಿ ಶಂಭು ಭಟ್‌, ‘ಪ್ರಜಾವಾಣಿ’ಗೆ ತಿಳಿಸಿದರು.

ಮಾರ್ಚ್‌ 1 ರ ಬಳಿಕ ಈಗಾಗಲೇ ಗುರುತಿನ ಚೀಟಿ ಹೊಂದಿರುವ ಎಲ್ಲ ಮತದಾರರು ಇ–ಎಪಿಕ್‌ ಪಡೆಯಬಹುದು. 18 ವರ್ಷ ತುಂಬಿದವರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ನಿರೀಕ್ಷೆಯಷ್ಟು ಆಗಿಲ್ಲ. ಇನ್ನೂ ದಿನಗಳಿವೆ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಂಡು ಎಲೆಕ್ಟ್ರಾನಿಕ್‌ ಮತದಾರರ ಗುರುತಿನ ಚೀಟಿ ಪಡೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ಯಾವ ವ್ಯಕ್ತಿ ಎಲೆಕ್ಟ್ರಾನಿಕ್‌ ಮತದಾರರ ಗುರುತಿನ ಚೀಟಿಯನ್ನು ಪಡೆಯಬೇಕೋ ಅವರು ತಮ್ಮ ಮೊಬೈಲ್‌ ಸಂಖ್ಯೆಯನ್ನೇ ನೋಂದಾಯಿಸಬೇಕು. ತಮ್ಮ ಮನೆಯ ಇತರ ಸದಸ್ಯರ ಮೊಬೈಲ್‌ ಸಂಖ್ಯೆ ಕೊಟ್ಟರೆ ಆಗುವುದಿಲ್ಲ. ಈಗಾಗಲೇ ಮತದಾರರ ಗುರುತಿನ ಚೀಟಿ ಪಡೆದವರ ಮೊಬೈಲ್‌ ಸಂಖ್ಯೆ ಲಿಂಕ್‌ ಆಗಿರುವುದರಿಂದ ಹೊಸ
ಮತದಾರರು ಅದೇ ಮೊಬೈಲ್ ಸಂಖ್ಯೆ ಕೊಟ್ಟರೆ ಇ–ಎಪಿಕ್‌ ಸೃಷ್ಟಿಸುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದರು.

ಹೊಸ ಮತದಾರರ ನೋಂದಣಿಯಿಂದ ಹಿಡಿದು ‘ಇ–ಎಪಿಕ್‌’ ಪಡೆಯಲು ‘ನ್ಯಾಷನಲ್‌ ವೋಟರ್ಸ್‌ ಸರ್ವೀಸ್‌ ಪೋರ್ಟಲ್‌’ ಸಂಪರ್ಕಿಸಬಹುದು. ಇ–ಎಪಿಕ್‌ ಪಿಡಿಎಫ್‌ ಅನ್ನು ಮೊಬೈಲ್‌ನ ಡಿಜಿಲಾಕರ್‌ನಲ್ಲಿ ಇಟ್ಟುಕೊಳ್ಳಬಹುದು. ಚುನಾವಣೆಯಲ್ಲಿ ಮೊಬೈಲ್‌ನಲ್ಲಿ ಇರುವ ಇ–ಎಪಿಕ್‌ ತೋರಿಸಿ
ಮತದಾನ ಮಾಡಬಹುದು. ಪ್ರತ್ಯೇಕ ಗುರುತಿನ ಚೀಟಿ ಒಯ್ಯಬೇಕಾಗಿಲ್ಲ ಎಂದು ಶಂಭುಭಟ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.