
ಬೆಂಗಳೂರು: ‘ಇ-ಸ್ವತ್ತು 2.0’ ಜಾರಿಗೊಳ್ಳುವ ಮೊದಲು ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳನ್ನು ಗ್ರಾಮ ಪಂಚಾಯತಿಗಳು ಸಮೀಕ್ಷೆಯ ಸಂದರ್ಭದಲ್ಲಿ ಕೈಬಿಟ್ಟಿದ್ದು, ಅದರಿಂದ ತೊಂದರೆಗೆ ಒಳಗಾಗಿರುವ ಜನರು ಹಾಗೂ ಸಂಸ್ಥೆಗಳು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ (ಸಿಇಒ) ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು– 2025’ರ ಅನ್ವಯ, ಈ ಹಿಂದೆ ಜಾರಿಯಲ್ಲಿದ್ದ ಇ-ಸ್ವತ್ತು ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಪರಿಷ್ಕರಿಸಿ ಡಿ. 1ರಂದು ‘ಇ-ಸ್ವತ್ತು 2.0’ ತಂತ್ರಾಂಶಕ್ಕೆ ಚಾಲನೆ ನೀಡಲಾಗಿತ್ತು. ಅದರಂತೆ, ಏಪ್ರಿಲ್ 7ಕ್ಕೂ ಮೊದಲು ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳು ಪಂಚತಂತ್ರ ತಂತ್ರಾಂಶದಲ್ಲಿ ನಮೂದು ಆಗದೇ ಇದ್ದರೆ, ಇ– ಖಾತಾ ಪಡೆಯಲು ‘ಇ-ಸ್ವತ್ತು 2.0’ ತಂತ್ರಾಂಶದ ‘ಸಿಟಿಜನ್ ಇಂಟರ್ ಫೇಸ್’ ಮೂಲಕ ಹೊಸ ನಮೂನೆ-11 ಬಿ ಅರ್ಜಿಗಳನ್ನು ಸಲ್ಲಿಸಬೇಕು. ಈವರೆಗೆ 27 ಸಾವಿರಕ್ಕೂ ಹೆಚ್ಚು ಹೊಸ ಅರ್ಜಿಗಳು ಸಲ್ಲಿಕೆ ಆಗಿವೆ. ಈ ಪೈಕಿ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯ ಅರ್ಜಿಗಳು 26 ಸಾವಿರ’ ಎಂದು ಅವರು ವಿವರಿಸಿದ್ದಾರೆ.
‘2025ರ ಏಪ್ರಿಲ್ 7ಕ್ಕಿಂತ ಮೊದಲು ಸೃಜನೆ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅರ್ಜಿಗಳನ್ನು ಪಿಡಿಒಗಳು ಹಾಗೂ ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿಗಳ ಮೂಲಕ ಅನುಮೋದನೆಗಾಗಿ ಸಿಇಒಗಳಿಗೆ ಕಳುಹಿಸಬೇಕು. ಸಿಇಒ ಅನುಮೋದನೆ ನೀಡಿದ ನಂತರ 15 ದಿನಗಳ ಒಳಗೆ ನಮೂನೆ-11 ಬಿ ವಿತರಿಸಲಾಗುವುದು. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.