ADVERTISEMENT

ಚಿತ್ರದುರ್ಗ ಶಾಸಕ ವೀರೇಂದ್ರ ಬಂಧನ: ಕಾಯ್ದಿರಿಸಿದ ಆದೇಶ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 16:05 IST
Last Updated 13 ಅಕ್ಟೋಬರ್ 2025, 16:05 IST
<div class="paragraphs"><p>ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ</p></div>

ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ

   

ಬೆಂಗಳೂರು: ‘ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ಬಂಧಿಸುವ ದಿನ ಅವರ ವಿರುದ್ಧ ಯಾವುದೇ ಎಫ್‌ಐಆರ್‌ ವಿಚಾರಣೆಗೆ ಬಾಕಿ ಇರಲಿಲ್ಲ. ಆದಾಗ್ಯೂ, ಅವರನ್ನು ಕಾನೂನು ಮೀರಿ ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿದೆ’ ಎಂದು ವೀರೇಂದ್ರ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.

‘ವೀರೇಂದ್ರ ಬಂಧನವನ್ನು ಅಕ್ರಮ ಎಂದು ಘೋಷಿಸಬೇಕು’ ಎಂದು ಕೋರಿ ಅವರ ಪತ್ನಿ ಆರ್‌.ಡಿ.ಚೈತ್ರಾ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತು.

ADVERTISEMENT

ವಿಚಾರಣೆ ವೇಳೆ ವೀರೇಂದ್ರ ಪರ ಸುಪ್ರೀಂ ಕೋರ್ಟ್‌ ಪದಾಂಕಿತ ಹಿರಿಯ ವಕೀಲ ಸಿದ್ಧಾರ್ಥ ದವೆ, ‘ವೀರೇಂದ್ರ ಅವರನ್ನು ಬಂಧಿಸುವಾಗ ಇ.ಡಿ ನಂಬಲರ್ಹ ಕಾರಣಗಳನ್ನೇ ನೀಡಿಲ್ಲ. ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿ, ಪಿಎಂಎಲ್‌ಎ (ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ–2002) ಕಲಂ 50ರ ಅಡಿ ನೋಟಿಸ್‌ ನೀಡಿ ಪ್ರತಿಕ್ರಿಯೆ ದಾಖಲಿಸಿಕೊಂಡು ಕಾನೂನು ಪ್ರಕಾರ ಮುಂದುವರಿಯಬೇಕಿತ್ತು. ಆದರೆ, ಇಲ್ಲಿ ಅದ್ಯಾವುದನ್ನೂ ಮಾಡದ ತನಿಖಾ ಸಂಸ್ಥೆ ಸ್ವೇಚ್ಛೆಯಿಂದ ನಡೆದುಕೊಂಡಿದೆ’ ಎಂದು ಆಕ್ಷೇಪಿಸಿದರು.

ಇದನ್ನು ಆಕ್ಷೇಪಿಸಿದ ಇ.ಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ ಕಾಮತ್‌, ‘ವೀರೇಂದ್ರ ಅವರನ್ನು ವಿಸ್ತೃತ ತನಿಖೆಯ ಬಳಿಕವೇ ಬಂಧಿಸಲಾಗಿದೆ. ಬಂಧಿಸುವುದಕ್ಕೂ ಮುನ್ನ ಆರು ನಂಬಲರ್ಹ ಕಾರಣಗಳನ್ನು ನೀಡಲಾಗಿದೆ. ಆಕ್ಷೇಪಣೆಯಲ್ಲಿ ಅವರು ಎಂತಹ ಕಥಾನಾಯಕ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ. ಭಾರತದಲ್ಲಿ ಹಣ ಸಂಗ್ರಹಿಸಿ ಕ್ಯಾಸಿನೋ ಆರಂಭಿಸಲು ಅದನ್ನು ವಿದೇಶಕ್ಕೆ ರವಾನಿಸಿರುವುದು ಅವರ ಅಪರಾಧ ಪ್ರಕ್ರಿಯೆಯಾಗಿದೆ’ ಎಂದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿರುವುದಾಗಿ ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.