ADVERTISEMENT

ಸೀಟ್‌ ಬ್ಲಾಕಿಂಗ್‌: ₹ 19.46 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 14:56 IST
Last Updated 24 ಜನವರಿ 2026, 14:56 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ಬೆಂಗಳೂರು: ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್‌ ದಂಧೆ ಪ್ರಕರಣದಲ್ಲಿ ನಗರದ ಬಿಎಂಎಸ್‌ ಶೈಕ್ಷಣಿಕ ಟ್ರಸ್ಟ್‌ನ ಟ್ರಸ್ಟಿಗಳಿಗೆ ಸೇರಿದ ₹19.46 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ಮುಟ್ಟುಗೋಲು ಹಾಕಿಕೊಂಡಿದೆ. 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದೂರಿನಡಿಯಲ್ಲಿ ಮಲ್ಲೇಶ್ವರ ಮತ್ತು ಹನುಮಂತನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಆಧಾರದಲ್ಲಿ, ಇ.ಡಿಯು ತನಿಖೆ ಆರಂಭಿಸಿತ್ತು. 2025ರ ಜೂನ್ 25 ಮತ್ತು 26ರಂದು ಬಿಎಂಎಸ್ಇಟಿಯ ವಿವಿಧ ಕಾಲೇಜುಗಳು, ಟ್ರಸ್ಟಿಗಳು ಮತ್ತು ಹಲವು ಮಧ್ಯವರ್ತಿಗಳ ಮನೆಗಳಲ್ಲಿ ಶೋಧ ನಡೆಸಿತ್ತು.

‘ಸಂಸ್ಥೆಯು ಸರ್ಕಾರಿ ಕೋಟಾದ ಸೀಟ್‌ಗಳಿಗೆ ಹೆಚ್ಚಿನ ಶುಲ್ಕ ವಸೂಲಿ ಮತ್ತು ಮಧ್ಯವರ್ತಿಗಳ ಮೂಲಕ ಹತ್ತು ಪಟ್ಟಿಗೂ ಹೆಚ್ಚು ಮೊತ್ತಕ್ಕೆ ಸೀಟ್‌ಗಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿತ್ತು. ಸೀಟ್‌ ಬ್ಲಾಕಿಂಗ್‌ನಿಂದ ₹20.20 ಕೋಟಿ ಸಂಗ್ರಹ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯ ಪ್ರತಿನಿಧಿಗಳು ಮತ್ತು ಮಧ್ಯವರ್ತಿಗಳ ವಾಟ್ಸ್‌ಆ್ಯಪ್‌ ಚಾಟ್‌ಗಳು, ಡೈರಿ ಮತ್ತು ಲೆಕ್ಕದ ಪುಸ್ತಕಗಳಲ್ಲಿ ಸಾಕ್ಷ್ಯಗಳು ಪತ್ತೆಯಾಗಿದ್ದವು. ಆದರೆ ಸಂಸ್ಥೆಯ ಲೆಕ್ಕಪತ್ರಗಳಲ್ಲಿ ಈ ಹಣವನ್ನು ತೋರಿಸಿರಲಿಲ್ಲ’ ಎಂದು ಇ.ಡಿ ಮಾಹಿತಿ ನೀಡಿದೆ.

ADVERTISEMENT

‘ಶೋಧದ ವೇಳೆ ₹1.86 ಕೋಟಿ ನಗದು ಪತ್ತೆಯಾಗಿತ್ತು. ಅದಕ್ಕೂ ಲೆಕ್ಕಪತ್ರವಿರಲಿಲ್ಲ. ಸೀಟ್‌ ಬ್ಲಾಕಿಂಗ್‌ ಮೂಲಕ, ಸೀಟ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬುದನ್ನು ಏಜೆಂಟರು, ಮಧ್ಯವರ್ತಿಗಳು, ಕಾಲೇಜಿನ ಸಿಬ್ಬಂದಿಯು ವಿಚಾರಣೆ ವೇಳೆ ದೃಢಪಡಿಸಿದ್ದರು’ ಎಂದು ಇ.ಡಿ ತಿಳಿಸಿದೆ.

‘ಅಕ್ರಮವಾಗಿ ಗಳಿಸಲಾದ ಹಣವನ್ನು ಟ್ರಸ್ಟಿಗಳು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದಾರೆ ಮತ್ತು ಸ್ವತ್ತುಗಳನ್ನು ಖರೀದಿಸಿದ್ದಾರೆ. ಹೀಗಾಗಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ’ ಎಂದು ವಿವರಿಸಿದೆ.