ADVERTISEMENT

ಇ.ಡಿ. ಸಮನ್ಸ್‌ ರದ್ದು ಕೋರಿ ಡಿಕೆಶಿ ಅರ್ಜಿ: ಇಂದು ಆದೇಶ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 20:01 IST
Last Updated 28 ಆಗಸ್ಟ್ 2019, 20:01 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ನವದೆಹಲಿಯ ಮನೆಗಳಲ್ಲಿ ದೊರೆತ ₹ 8.60 ಕೋಟಿಯಷ್ಟು ಲೆಕ್ಕವಿಲ್ಲದ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿರುವ ಸಮನ್ಸ್‌ ರದ್ದುಗೊಳಿಸಲು ಕೋರಿ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಸೇರಿದಂತೆ ಒಟ್ಟು ಐವರು ಆರೋಪಿಗಳು ಸಲ್ಲಿಸಿರುವ ರಿಟ್‌ ಅರ್ಜಿಗಳ ಮೇಲಿನ ಆದೇಶವನ್ನು ಹೈಕೋರ್ಟ್‌ ಗುರುವಾರ ಪ್ರಕಟಿಸುವ ನಿರೀಕ್ಷೆ ಇದೆ.

‘ಈ ಕುರಿತಂತೆ ಆದೇಶದ ಮೇಲಿನ ಉಕ್ತಲೇಖನ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಗುರುವಾರ ಪೂರ್ಣಗೊಳಿಸಲಾಗುವುದು’ ಎಂದು ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದೆ.

ಪ್ರಕರಣವೇನು?: 2017ರ ಆಗಸ್ಟ್‌ 2ರಂದು ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಡಿ.ಕೆ.ಶಿವಕುಮಾರ್‌ಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ಮನೆಗಳ ಮೇಲೆ ದಾಳಿ ಮಾಡಿ ₹ 8,59,69,100 ಮೊತ್ತವನ್ನು ಜಪ್ತಿ ಮಾಡಿದ್ದಾರೆ.

ADVERTISEMENT

ಡಿ.ಕೆ.ಶಿವಕುಮಾರ್, ಸಚಿನ್‌ ನಾರಾಯಣ, ಸುನಿಲ್‌ ಕುಮಾರ್‌ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯ್ದೆ–1961ರ ಕಲಂ 277 ಮತ್ತು 278 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 120 ಬಿ, 193 ಹಾಗೂ 199ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಜಾರಿಗೊಳಿಸಿರುವ ಸಮನ್ಸ್‌ ರದ್ದು ಕೋರಿ ಆರೋಪಿಗಳು ಈ ಅರ್ಜಿ ಸಲ್ಲಿಸಿದ್ದಾರೆ.

ಮತ್ತೊಂದು ಅರ್ಜಿ: ‘ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್‌ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮುಖ್ಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ (ಆ.29) ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.