ADVERTISEMENT

ಸಿಸಿಬಿ ತನಿಖೆಯ ಮಾಹಿತಿ ಕೇಳಿದ ಇ.ಡಿ

ಲೇವಾದೇವಿ ನಿಯಂತ್ರಣ ಕಾಯ್ದೆಯಡಿ ಕ್ರಮಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:29 IST
Last Updated 8 ನವೆಂಬರ್ 2018, 20:29 IST

ಬೆಂಗಳೂರು: ಹೆಚ್ಚಿನ ಬಡ್ಡಿ ಕೊಡುವುದಾಗಿ ಹೇಳಿ ಜನರಿಂದ ಭಾರಿ ಹಣ ಸಂಗ್ರಹಿಸಿ ವಂಚಿಸಿದ ಆರೋಪ ಎದುರಿಸುತ್ತಿರುವ ‘ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಪ್ರೈವೇಟ್‌ ಕಂಪನಿ’ ವಿರುದ್ಧ ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆಯ ಮಾಹಿತಿ ನೀಡುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಕೇಳಿದೆ.

ಲೇವಾದೇವಿ ನಿಯಂತ್ರಣ ಕಾಯ್ದೆಯಡಿ ಆ್ಯಂಬಿಡೆಂಟ್‌ ಕಂಪೆನಿ ಮಾಲೀಕ ಸಯ್ಯದ್‌ ಅಹಮದ್‌ ಫರೀದ್‌, ಸಯ್ಯದ್‌ ಅಫಕ್‌ ಅಹಮದ್‌ ಹಾಗೂ ಇತರರ ವಿರುದ್ಧ ತನಿಖೆ ಕೈಗೊಳ್ಳುವ ಕುರಿತು ಚಿಂತಿಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.

ಫರೀದ್‌ ಮತ್ತು ಅವರ ಪುತ್ರನ ಒಡೆತನದ ಕಂಪನಿ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ (ಫೆಮ) ಜಾರಿ ನಿರ್ದೇಶನಾಲಯ ನಡೆಸುತ್ತಿದ್ದ ತನಿಖೆ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ₹ 20 ಕೋಟಿ ಡೀಲ್‌ ಕುದುರಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬಳಿಕ ಇ.ಡಿ. ಎಚ್ಚೆತ್ತುಕೊಂಡಿದೆ.

ADVERTISEMENT

ಆದಾಯ ತೆರಿಗೆ ಇಲಾಖೆ 2017ರ ನವೆಂಬರ್‌ 13ರಂದು ಬರೆದ ಪತ್ರ ಆಧರಿಸಿ, ಜನವರಿ 4 ಹಾಗೂ 5ರಂದು ಜಾರಿ ನಿರ್ದೇಶನಾಲಯ ಫರೀದ್‌ ಅವರಿಗೆ ಸೇರಿದ ಅನೇಕ ಕಂಪನಿಗಳು ಹಾಗೂ ಮನೆಗಳನ್ನು ಶೋಧಿಸಿತ್ತು. ಅವರ ಮನೆಯಲ್ಲಿ ₹ 1.97 ಕೋಟಿ ನಗದು ವಶಪಡಿಸಿಕೊಂಡಿತ್ತು.

ಫೆಮ ಕಾಯ್ದೆ ಉಲ್ಲಂಘಿಸಿ, ದುಬೈಯಲ್ಲಿ ₹ 4 ಕೋಟಿ ವಿದೇಶಿ ವ್ಯವಹಾರ (ಅಮೆರಿಕ $ 6,62,146) ನಡೆದಿರುವುದು ಗಮನಕ್ಕೆ ಬಂದಿತ್ತು. ರಿಸರ್ವ್‌ ಬ್ಯಾಂಕ್‌ ಒಪ್ಪಿಗೆ ಪಡೆಯದೆ ಬ್ಯಾಂಕ್‌ ಖಾತೆ ತೆರೆಯಲಾಗಿತ್ತು. ಕಂಪನಿ ಸ್ಥಾಪನೆಗೂ ಅನುಮತಿ ಪಡೆಯದ ಸಂಗತಿ ಬಯಲಾಗಿತ್ತು. ಈ ಬಗ್ಗೆ ವಿಚಾರಣೆ ಎದುರಿಸಿದ್ದ ಆರೋಪಿಗಳಿಂದ ₹ 1.86 ಕೋಟಿ ದಂಡ ವಸೂಲು ಮಾಡಲಾಗಿತ್ತು. ಅಲ್ಲದೆ, ಶೋಧನೆ ಸಮಯದಲ್ಲಿ ಸಿಕ್ಕಿದ್ದ ₹ 1.97 ಕೋಟಿ ಜಪ್ತಿ ಮಾಡಲಾಗಿತ್ತು.

‘ನಗರದಲ್ಲೂ ಆ್ಯಂಬಿಡೆಂಟ್‌ ಕಂಪನಿ ಜನರಿಗೆ ಮಾಸಿಕ ಶೇ 12ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ₹ 954 ಕೋಟಿ ಸಂಗ್ರಹಿಸಿದೆ. ಈ ಸಂಸ್ಥೆಯನ್ನು ಆರ್‌ಬಿಐ ಅಥವಾ ಸೆಬಿಯಲ್ಲಿ ನೋಂದಣಿ ಮಾಡಿಲ್ಲ. ಈ ಬಗ್ಗೆ ನಡೆದ ತನಿಖೆಯಿಂದ, ಇದೊಂದು ಜನರಿಗೆ ವಂಚನೆ ಮಾಡಲಿರುವ ಕಂಪನಿ ಎಂಬ ಸಂಗತಿ ಬಯಲಾಯಿತು. ಆ ಕಂಪನಿ ವಿರುದ್ಧ ಕೆಪಿಐಡಿ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಆರ್‌ಬಿಐಗೂ ಇ.ಡಿ ಪತ್ರ ಬರೆದಿತ್ತು.

**

ರೆಡ್ಡಿಗೆ ಕುಣಿಕೆ ಬಿಗಿಗೊಳಿಸಲು ನಾಯ್ಡು ಒತ್ತಡ

ಬೆಂಗಳೂರು:₹ 20 ಕೋಟಿ ಡೀಲ್‌ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣವನ್ನು ಬಿಗಿಗೊಳಿಸುವಂತೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.

ಕುಮಾರಸ್ವಾಮಿ ಅವರ ಜತೆಗಿನ ಮಾತುಕತೆ ಸಂದರ್ಭದಲ್ಲಿ ನಾಯ್ಡು ಈ ವಿಷಯ ಪ್ರಸ್ತಾಪಿಸಿದರು ಎಂದು ಮೂಲಗಳು ತಿಳಿಸಿವೆ.

‘ಇಲ್ಲಿ ಜನಾರ್ದನ ರೆಡ್ಡಿಯನ್ನು ಬಿಗಿ ಮಾಡಿದರೆ ಆಂಧ್ರದಲ್ಲಿ ವೈಆರ್‌ಎಸ್‌ ಕಾಂಗ್ರೆಸ್‌ನ ಜಗನ್‌ಮೋಹನ್ ರೆಡ್ಡಿಕಟ್ಟಿ ಹಾಕಬಹುದು. ರೆಡ್ಡಿ ಮತ್ತು ಜಗನ್‌ ಒಳ ವ್ಯವಹಾರಗಳನ್ನೂ ಮಟ್ಟ ಹಾಕಬಹುದು’ ಎಂದು ಹೇಳಿದರೆಂದು ಮೂಲಗಳು ತಿಳಿಸಿವೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕುಮಾರಸ್ವಾಮಿ, ‘ರೆಡ್ಡಿ ವಿರುದ್ಧ ರಾಜಕೀಯ ದ್ವೇಷ ರಿಸಿಕೊಳ್ಳುತ್ತಿಲ್ಲ.ವಂಚನೆ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗಿದ್ದು, ಪೊಲೀಸರಿಗೆ ತನಿಖೆಯ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇನೆ. ತನಿಖೆಯ ಯಾವ ಹಂತದಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ತಿಳಿಸಿದರು.

**

ರಾಜಕಾರಣಿಗಳ ನಂಟು?

ಬೆಂಗಳೂರು: ‘ಇ.ಡಿ ಡೀಲ್’ ಸುಳಿಯಲ್ಲಿ ಸಿಲುಕಿರುವ ಸೈಯದ್ ಫರೀದ್‌ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಜತೆಗೂ ನಂಟು ಹೊಂದಿದ್ದು, ಹಬ್ಬ–ಹರಿದಿನಗಳ ಸಂದರ್ಭಗಳಲ್ಲಿ ಅವರಿಗೆ ಉಡುಗೊರೆಗಳನ್ನು ಕೊಟ್ಟು ಸಲುಗೆಯನ್ನು ಗಟ್ಟಿ ಮಾಡಿಕೊಂಡಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಆಡಳಿತರೂಢ ಮೈತ್ರಿ ಪಕ್ಷಗಳ ಹಾಗೂ ವಿರೋಧ ಪಕ್ಷದ ಪ್ರಭಾವಿ ನಾಯಕರ ಜತೆ ಫರೀದ್‌ಗೆ ನಂಟಿದೆ. ಈ ಸ್ನೇಹದಲ್ಲೇ ಆ ನಾಯಕರಿಗೆ ಚುನಾವಣಾ ಖರ್ಚು ವೆಚ್ಚವನ್ನು ಫರೀದ್ ನೋಡಿಕೊಂಡಿದ್ದರು ಎಂಬ ಮಾಹಿತಿಯೂ ಇದೆ. ಆ ನಿಟ್ಟಿನಲ್ಲೂ ವಿಚಾರಣೆ ನಡೆಸುತ್ತಿದ್ದೇವೆ’ ಎಂದರು.

ಗುಂಡುಗಳು ಪತ್ತೆ: 57 ಕೆ.ಜಿ ಚಿನ್ನದ ಹುಡುಕಾಟದಲ್ಲಿರುವ ಸಿಸಿಬಿ ಪೊಲೀಸರು, ಆರ್‌.ಟಿ.ನಗರದಲ್ಲಿರುವ ರೆಡ್ಡಿ ಪಿಎ ಆಲಿಖಾನ್‌ ಮನೆ ಮೇಲೆ ದಾಳಿ ನಡೆಸಿದಾಗ 5ಜೀವಂತ ಗುಂಡುಗಳು ಪತ್ತೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.