ADVERTISEMENT

'ಪಪ್ಪಿ' ಕೋಟೆಗೆ ಇ.ಡಿ ಲಗ್ಗೆ: ಎಲ್ಲೆಲ್ಲಿ ಶೋಧ ಆಗಿದೆ ಗೊತ್ತಾ?

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಮಾಲೀಕತ್ವದ ಕ್ಯಾಸಿನೊಗಳು, ಕಚೇರಿ, ಮನೆಗಳಲ್ಲಿ ಭಾರಿ ಶೋಧ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 23:52 IST
Last Updated 22 ಆಗಸ್ಟ್ 2025, 23:52 IST
ಶಾಸಕ ಕೆ.ಸಿ.ವೀರೇಂದ್ರ
ಶಾಸಕ ಕೆ.ಸಿ.ವೀರೇಂದ್ರ   

ಬೆಂಗಳೂರು: ಅಕ್ರಮವಾಗಿ ಆನ್‌ಲೈನ್‌ ಬೆಟ್ಟಿಂಗ್‌ ಕಂಪನಿ ನಡೆಸುತ್ತಿದ್ದ ಆರೋಪದ ಪ್ರಕರಣದಲ್ಲಿ, ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಮನೆಗಳು, ಕಚೇರಿ ಸೇರಿ ದೇಶದಾದ್ಯಂತ ಒಟ್ಟು 30 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ರಾಜ್ಯ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಚಿತ್ರದುರ್ಗದ 6, ಬೆಂಗಳೂರಿನ 10, ಗೋವಾದ 5, ಹುಬ್ಬಳ್ಳಿ, ಮುಂಬೈ, ಜೋಧ‍ಪುರದ ತಲಾ ಒಂದು ಕಡೆ ಮತ್ತು ಸಿಕ್ಕಿಂನಲ್ಲಿ ಐದು ಕಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚಳ್ಳಕೆರೆಯ ಮನೆಯ ಮೇಲಿನ ದಾಳಿ ವೇಳೆ ವೀರೇಂದ್ರ ಮನೆಯಲ್ಲಿ ಇರಲಿಲ್ಲ. ಪರಿಶೀಲನೆ ಆರಂಭವಾದ ನಂತರ ಶಾಸಕರ ಸಹೋದರ ಕೆ.ಸಿ.ನಾಗರಾಜ್‌ ಅವರು ವಕೀಲರೊಬ್ಬರನ್ನು ಕರೆದುಕೊಂಡು ಬಂದರು. ಇ.ಡಿ ಅಧಿಕಾರಿಗಳು ನಾಗರಾಜ್‌ ಅವರನ್ನು ಮಾತ್ರ ಒಳಗೆ ಕರೆಸಿ ವಕೀಲರನ್ನು ವಾಪಸ್‌ ಕಳುಹಿಸಿದರು.

ADVERTISEMENT

‘ವೀರೇಂದ್ರ ಮತ್ತು ಅವರ ಸೋದರರಾದ ಕೆ.ಸಿ.ತಿಪ್ಪೇಸ್ವಾಮಿ, ಕೆ.ಸಿ.ನಾಗರಾಜು ಅವರು ಕರ್ನಾಟಕ ಮತ್ತು ಗೋವಾದ ಹಲವೆಡೆ ಕ್ಯಾಸಿನೊ ಮತ್ತು ವಿಡಿಯೊ ಗೇಮ್‌ ಸೆಂಟರ್‌ಗಳನ್ನು ನಡೆಸುತ್ತಿದ್ದಾರೆ. ಜತೆಗೆ ಆನ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ ಅಕ್ರಮವಾಗಿ ಬೆಟ್ಟಿಂಗ್‌ ಗೇಮ್‌ಗಳನ್ನು ನಡೆಸುತ್ತಿರುವ ಬಗ್ಗೆ ದೂರುಗಳಿವೆ. ದೂರನ್ನು ಆಧರಿಸಿ ದಾಳಿ ನಡೆಸಲಾಗಿದೆ’ ಎಂದು ಇ.ಡಿ ಮೂಲಗಳು ಖಚಿತಪಡಿಸಿವೆ.

‘ಕ್ಯಾಸಿನೊಗಳಲ್ಲಿ ಕಪ್ಪು ಹಣ ಹೂಡಿಕೆ ಆಗಿರುವ ಬಗ್ಗೆ ಮಾಹಿತಿಗಳಿದ್ದು, ಆ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಶೋಧ ನಡೆಸಲಾಗುತ್ತಿದೆ. ಚಳ್ಳಕೆರೆಯಲ್ಲಿ ಶಾಸಕರಿಗೆ ಸೇರಿದ ನಾಲ್ಕು ಮನೆಗಳಲ್ಲಿ, ಆಪ್ತರ ಮನೆಗಳಲ್ಲಿ ಶೋಧ ನಡೆಸಲಾಗಿದೆ. ಶಾಸಕರ ಆಪ್ತರು, ಕುಟುಂಬದವರು, ಸೋದರರನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಖಚಿತಪಡಿಸಿವೆ.

‘ಸಿಕ್ಕಿಂನಲ್ಲಿ ಸ್ಥಳೀಯರು ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಕ್ಯಾಸಿನೊಗಳಲ್ಲಿ ಜೂಜಾಡುವುದಕ್ಕೆ ನಿಷೇಧವಿದೆ. ಹೊರರಾಜ್ಯದ ಪ್ರವಾಸಿಗರು ಮಾತ್ರವೇ ಅಲ್ಲಿ ಜೂಜಿನಲ್ಲಿ ಭಾಗಿಯಾಗಲು ಅವಕಾಶವಿದೆ. ಆದರೆ ವೀರೇಂದ್ರ ಪಪ್ಪಿ ಅವರ ಕುಟುಂಬದ ಮಾಲೀಕತ್ವದ ಕಂಪನಿಗಳು ಅವುಗಳೊಂದಿಗೆ ವ್ಯಾವಹಾರಿಕ ನಂಟು ಹೊಂದಿರುವ ಕಂಪನಿಗಳು ಸಿಕ್ಕಿಂ ನಿವಾಸಿಗಳಿಗೆ ಹೊರರಾಜ್ಯದ ವಿಳಾಸದ ಚೀಟಿಗಳನ್ನು ನೀಡಿ, ಜೂಜಾಡಲು ಅವಕಾಶ ಮಾಡಿಕೊಟ್ಟಿದ್ದವು. ಈ ಕಂಪನಿಗಳ ಮಧ್ಯೆ ದೊಡ್ಡ ಮೊತ್ತದ ಹಣ ವರ್ಗಾವಣೆಯಾಗಿದೆ’ ಎಂದು ಮಾಹಿತಿ ನೀಡಿವೆ.

‘ಗೋವಾದಲ್ಲಿನ ಕ್ಯಾಸಿನೊಗಳಲ್ಲಿ ಗಳಿಕೆಯಾದ ಹಣಕ್ಕೆ ಸಂಬಂಧಿಸಿದಂತೆ ತಪ್ಪು ಲೆಕ್ಕ ತೋರಿಸಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಯು ಮಾಹಿತಿ ನೀಡಿತ್ತು. ಶುಕ್ರವಾರದ ಶೋಧದ ವೇಳೆ ಈ ಕ್ಯಾಸಿನೊ, ಕ್ಲಬ್‌ ಮತ್ತು ಗೇಮಿಂಗ್‌ ಸೆಂಟರ್‌ಗಳ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿವೆ.

ಇ.ಡಿಯ ದೆಹಲಿ ಕೇಂದ್ರ ಕಚೇರಿ, ಬೆಂಗಳೂರು, ಗೋವಾ, ಮುಂಬೈ ಮತ್ತು ಕೋಲ್ಕತ್ತಾ ವಲಯ ಕಚೇರಿಗಳ ಸಹಯೋಗದಲ್ಲಿ ದಾಳಿ ನಡೆಸಲಾಗಿದೆ. ಶುಕ್ರವಾರ ರಾತ್ರಿ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಯಲ್ಲಿಯೂ ಹಲವೆಡೆ ಶೋಧ ಮುಂದುವರಿದಿತ್ತು.

ಎಲ್ಲೆಲ್ಲಿ ಶೋಧ...?

  • ಗೋವಾದ ಕ್ಯಾಸಿನೊ ಗೋಲ್ಡ್‌ ಓಶನ್‌ ರಿವರ್ಸ್‌ ಕ್ಯಾಸಿನೊ ಪಪ್ಪೀ’ಸ್‌ ಕ್ಯಾಸಿನೊ ಪ್ರೈಡ್‌ ಓಶನ್‌ 7 ಕ್ಯಾಸಿನೊ ಬಿಗ್‌ ಡ್ಯಾಡಿ ಕ್ಯಾಸಿನೊ ಪ್ರೈಡ್‌

  • ಬೆಂಗಳೂರು ಮುಂಬೈನ ಕಿಂಗ್‌567 ರಾಜಾ567 ಪಪ್ಪೀ’ಸ್‌003 ರತ್ನಾ ಗೇಮಿಂಗ್‌ ಎಂಬ ಆನ್‌ಲೈನ್‌ ಗೇಮಿಂಗ್‌ ಕಚೇರಿಗಳು

  • ಸಿಕ್ಕಿಂನಲ್ಲಿನ ಪಪ್ಪೀ’ಸ್‌ ಕ್ಯಾಸಿನೊ ಪ್ರೈಡ್‌ ಮೇಫೇರ್‌ಕ್ಯಾಸಿನೊ ಮತ್ತು ಮೇಫೇರ್‌ ಸ್ಪಾ ರೆಸಾರ್ಟ್ಸ್‌ ಆ್ಯಂಡ್‌ ಕ್ಯಾಸಿನೊ

  • ಜೋಧಪುರದಲ್ಲಿನ ಪಪ್ಪೀ’ಸ್‌ ಕ್ಯಾಸಿನೊ ಪ್ರೈಡ್‌

  • ಚಳ್ಳಕೆರೆಯಲ್ಲಿ ವೀರೇಂದ್ರ ಪಪ್ಪಿ ಮತ್ತು ಸೋದರರ ನಾಲ್ಕು ಮನೆ ಮತ್ತು ಒಂದು ಕಚೇರಿ ಚಿತ್ರದುರ್ಗದಲ್ಲಿ ಆಪ್ತರಿಗೆ ಸೇರಿದ ಎರಡು ಮನೆ * ಬೆಂಗಳೂರಿನ ಸಹಕಾರ ನಗರದಲ್ಲಿರುವ ವೀರೇಂದ್ರ ಅವರ ಮನೆ

ಈಗ ಬೆಂಗಳೂರಿನಿಂದ ಬಂದಿದ್ದೇನೆ. ಯಾವ ಕಾರಣಕ್ಕೆ ಶೋಧ ನಡೆಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ತನಿಖೆಗೂ ನಾವು ಸಿದ್ಧರಾಗಿದ್ದೇವೆ. ಶಾಸಕ ವೀರೇಂದ್ರ ಅವರೂ ಶೀಘ್ರ ಬರುತ್ತಾರೆ.
– ಕೆ.ಸಿ.ನಾಗರಾಜ್‌ ಶಾಸಕ ವೀರೇಂದ್ರ ಅವರ ಸೋದರ

ದುಬೈನಿಂದ ಆನ್‌ಲೈನ್‌ ಗೇಮ್‌ ನಿರ್ವಹಣೆ

‘ವೀರೇಂದ್ರ ಪಪ್ಪಿ ಮತ್ತು ಸೋದರರ ಮಾಲೀಕತ್ವದ ಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರಂಗಳನ್ನು ದುಬೈನಲ್ಲಿನ ಕೆಲವು ಕಂಪನಿಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಈ ಕಂಪನಿಗಳನ್ನು ಕಾಲ್‌ಸೆಂಟರ್‌ನಂತೆ ತೋರಿಸಲಾಗಿದೆ’ ಎಂದು ಇ.ಡಿ ಮೂಲಗಳು ಮಾಹಿತಿ ನೀಡಿವೆ.

‘ಕೆ.ಸಿ.ತಿಪ್ಪೇಸ್ವಾಮಿ ದುಬೈನಲ್ಲಿ ಡೈಮಂಡ್‌ ಸಾಫ್ಟ್‌ಟೆಕ್‌ ಟಿಆರ್‌ಎಸ್‌ ಟೆಕ್ನಾಲಜೀಸ್‌ ಮತ್ತು ಪ್ರೈಮ್‌9ಟೆಕ್ನಾಲಜೀಸ್‌ ಎಂಬ ಮೂರು ಕಂಪನಿಗಳನ್ನು ನೋಂದಣಿ ಮಾಡಿದ್ದಾರೆ. ಈ ಮೂರೂ ಕಂಪನಿಗಳು ಭಾರತದಲ್ಲಿನ ಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರಂಗಳನ್ನು ನಿರ್ವಹಿಸುತ್ತಿವೆ’ ಎಂದು ವಿವರಿಸಿವೆ.

‘ಭಾರತದಲ್ಲಿ ಗಳಿಕೆಯಾದ ಹಣದಲ್ಲಿ ಬಹುಪಾಲನ್ನು ಈ ಕಂಪನಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಹಲವು ಸೆಕ್ಷನ್‌ಗಳನ್ನು ಈ ಮೂಲಕ ಉಲ್ಲಂಘಿಸಿರುವ ಬಗ್ಗೆ ದಾಖಲೆಗಳು ದೊರೆತಿವೆ’ ಎಂದು ಮಾಹಿತಿ ನೀಡಿವೆ.

ಕುಸುಮಾ ಸೋದರನ ಮನೆಯಲ್ಲಿ ಶೋಧ
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರ ಸೋದರ ಅನಿಲ್‌ ಗೌಡ ಮನೆಯಲ್ಲೂ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ‘ವೀರೇಂದ್ರ ಅವರ ಕಂಪನಿಗಳ ಪ್ರಕರಣದಲ್ಲೇ ಅನಿಲ್‌ ಗೌಡ ಅವರ ಮನೆಯಲ್ಲಿ ಶೋಧ ನಡೆಸಲಾಗಿದೆ. ರಾಜರಾಜೇಶ್ವರಿನಗರ ನಾಗರಭಾವಿ ಮತ್ತು ಪಾಪರೆಡ್ಡಿ ಪಾಳ್ಯದಲ್ಲಿನ ಮೂರು ಮನೆಗಳು ಮತ್ತು ಒಂದು ಕಚೇರಿಯಲ್ಲೂ ಶೋಧ ನಡೆಸಲಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.