ADVERTISEMENT

ಬೆಟ್ಟಿಂಗ್‌ ಪ್ರಕರಣ: ವೀರೇಂದ್ರ ಲಾಕರ್‌ನಲ್ಲಿ ಚಿನ್ನಲೇಪಿತ ಬೆಳ್ಳಿ ಬಿಸ್ಕತ್‌ಗಳು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 0:31 IST
Last Updated 10 ಸೆಪ್ಟೆಂಬರ್ 2025, 0:31 IST
ಶಾಸಕ ಕೆ.ಸಿ.ವೀರೇಂದ್ರ ಅವರ ಬ್ಯಾಂಕ್‌ ಲಾಕರ್‌ನಲ್ಲಿ ಪತ್ತೆಯಾದ ಚಿನ್ನ ಮತ್ತು ಚಿನ್ನ ಲೇಪಿತ ಬೆಳ್ಳಿಯ ಬಿಸ್ಕತ್ತುಗಳು. 
ಶಾಸಕ ಕೆ.ಸಿ.ವೀರೇಂದ್ರ ಅವರ ಬ್ಯಾಂಕ್‌ ಲಾಕರ್‌ನಲ್ಲಿ ಪತ್ತೆಯಾದ ಚಿನ್ನ ಮತ್ತು ಚಿನ್ನ ಲೇಪಿತ ಬೆಳ್ಳಿಯ ಬಿಸ್ಕತ್ತುಗಳು.    

ಬೆಂಗಳೂರು: ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಬ್ಯಾಂಕ್‌ ಲಾಕರ್‌ನಲ್ಲಿ ದೊರೆತ ಚಿನ್ನದ ಬಿಸ್ಕತ್‌ಗಳನ್ನು ಪರಿಶೀಲಿಸುತ್ತಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬೇಸ್ತು ಬಿದ್ದಿದ್ದಾರೆ. ಲಾಕರ್‌ನಲ್ಲಿ ಇದ್ದದ್ದೆಲ್ಲವೂ ಚಿನ್ನ ಎಂದು ಲೆಕ್ಕ ಬರೆದುಕೊಂಡಿದ್ದ ತನಿಖಾಧಿಕಾರಿಗಳಿಗೆ, ಅವೆಲ್ಲವೂ ಚಿನ್ನ ಅಲ್ಲ ಎಂಬುದು ಗೊತ್ತಾಗಿದೆ.

ತಮ್ಮ ಬಂಧನದಲ್ಲಿರುವ ವೀರೇಂದ್ರ ಅವರು ವಿಚಾರಣೆ ವೇಳೆ ನೀಡಿದ್ದ ಮಾಹಿತಿಯ ಆಧಾರದಲ್ಲಿ ಚಳ್ಳಕೆರೆಯಲ್ಲಿನ ಹಲವು ಬ್ಯಾಂಕ್‌ಗಳಲ್ಲಿರುವ ಲಾಕರ್‌ಗಳನ್ನು ಇ.ಡಿ ಅಧಿಕಾರಿಗಳು ಇದೇ 6ರಂದು ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಲಾಕರ್‌ ಒಂದರಲ್ಲಿ 32.41 ಕೆ.ಜಿಯಷ್ಟು ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿದ್ದವು ಎಂದು ಇ.ಡಿ ಅಧಿಕಾರಿಗಳು ಹೇಳಿದ್ದರು.

‘ತನಿಖಾಧಿಕಾರಿಗಳು ಮೊದಲಿಗೆ ಅಷ್ಟನ್ನೂ ಚಿನ್ನ ಎಂದೇ ಪರಿಗಣಿಸಿದ್ದರು. ಎಲ್ಲ ಬಿಸ್ಕತ್‌ಗಳ ಬಣ್ಣ ಭಿನ್ನವಾಗಿ ಇದ್ದುದ್ದರಿಂದ, ಕೂಲಂಕಶವಾಗಿ ಪರಿಶೀಲಿಸಲಾಯಿತು. ಅವುಗಳಲ್ಲಿ 10.98 ಕೆ.ಜಿ ತೂಕದ 11 ಬಿಸ್ಕತ್‌ಗಳು ಚಿನ್ನದ್ದಲ್ಲ ಎಂಬುದು ಗೊತ್ತಾಯಿತು. ಆ ಹನ್ನೊಂದೂ ಬೆಳ್ಳಿಯ ಬಿಸ್ಕತ್‌ಗಳಿಗೆ 22 ಕ್ಯಾರಟ್‌ನ ಚಿನ್ನದ ಲೇಪನ ಮಾಡಿರುವುದು ಪತ್ತೆಯಾಯಿತು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬೆಳ್ಳಿಯ ಬಿಸ್ಕತ್‌ಗಳಿಗೆ ಚಿನ್ನದ ಲೇಪನ ಏಕೆ ಮಾಡಲಾಗಿತ್ತು, ಅವುಗಳನ್ನು ಖರೀದಿಸಿದ್ದರೆ ಅಥವಾ ಇತರರು ಅವರಿಗೆ ನೀಡಿದ್ದರೆ ಎಂಬುದರ ತನಿಖೆ ನಡೆಯುತ್ತಿದೆ. ಅವು ಬೆಟ್ಟಿಂಗ್‌ನಲ್ಲಿ ಹಣದ ಬದಲಿಗೆ ನೀಡಿರುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿವೆ.

ಇವುಗಳ ಜತೆಗೆ, ವಜ್ರದ ಹರಳುಗಳಿದ್ದ 17 ಚಿನ್ನದ ಉಂಗುರಗಳು ಸೇರಿ 1 ಕೆ.ಜಿ.ಯಷ್ಟು ಚಿನ್ನಾಭರಣಗಳೂ ಪತ್ತೆಯಾಗಿತ್ತು. ಈ ಚಿನ್ನಾಭರಣ ಮತ್ತು ಚಿನ್ನ–ಬೆಳ್ಳಿಯ ಬಿಸ್ಕತ್‌ ಖರೀದಿಗೆ ಸಂಬಂಧಿಸಿದ ರಸೀದಿಗಳು, ಹಣ ವರ್ಗಾವಣೆಯ ದಾಖಲೆಗಳು ಪತ್ತೆಯಾಗಿಲ್ಲ. ಚಿನ್ನದ ಬಿಸ್ಕತ್‌ಗಳು ಹವಾಲಾ ಮೂಲಕ ಬಂದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿವೆ.

ವೀರೇಂದ್ರ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ ನೋಂದಣಿಯಾಗಿರುವ ಮತ್ತಷ್ಟು ಬ್ಯಾಂಕ್‌ ಲಾಕರ್‌ಗಳು ಇದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿವೆ.

ಹಣದ ಜಾಡು ತಪ್ಪಿಸುವ ತಂತ್ರ

  • ಆರೋಪಿ ಮತ್ತು ಅವರ ಕುಟುಂಬದವರು ಹೊಂದಿರುವ 262 ಬೇನಾಮಿ ಖಾತೆಗಳಿಂದ ಸಾವಿರಾರು ಏರ್‌ ಟಿಕೆಟ್‌ ಖರೀದಿ

  • ವಿದೇಶಿ ಪ್ರಯಾಣಕ್ಕಾಗಿ ವೀರೇಂದ್ರ ಮತ್ತು ಕುಟುಂಬದವರ ಹೆಸರಿನಲ್ಲಿ ವಿಮಾನಯಾನ ಟಿಕೆಟ್‌ ಮತ್ತು ರೆಸಾರ್ಟ್‌ ಕೊಠಡಿಗಳ ಬುಕ್ಕಿಂಗ್‌

  • ವಿವಿಧ ಕಂಪನಿಗಳ ಮೂಲಕ ಆಪ್ತರ ಹೆಸರಿನಲ್ಲಿ ಐಷರಾಮಿ ಕಾರುಗಳ ಖರೀದಿ

  • ಇ.ಡಿ ವಶಕ್ಕೆ ಪಡೆದ 9 ಕಾರುಗಳಲ್ಲಿ 2018ರ ಸ್ಕಾರ್ಪಿಯೋ ಮಾತ್ರ ವೀರೇಂದ್ರ ಹೆಸರಿನಲ್ಲಿದೆ. ಉಳಿದೆಲ್ಲಾ ಕಾರುಗಳು ಅನ್ಯರ ಹೆಸರಿನಲ್ಲಿವೆ

  • ವೀರೇಂದ್ರ ಪಾಲುದಾರ ಅನಿಲ್‌ ಗೌಡ ಹೆಸರಿನಲ್ಲಿ ಮರ್ಸಿಡೆಸ್‌ ಬೆಂಜ್‌ ಕಾರು ಗುಲ್ಶನ್‌ ಖಟ್ಟರ್ ಒಡೆತನದ ಫೋನ್‌ಪೈಸಾ ಹೆಸರಿನಲ್ಲಿ ರೇಂಜ್ ರೋವೆರ್ ಆಟೊಬಯೋಗ್ರಫಿ ಖರೀದಿ

  • ಖಾಸಗಿ ಕಂಪನಿಗಳು ಖರೀದಿಸರುವ ಕಾರುಗಳಿಗೆ ಜಿಎಸ್‌ಟಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಸಹ ಪಡೆಯಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.