ADVERTISEMENT

ಬಾಗೇಪಲ್ಲಿ ಕಾಂಗ್ರೆಸ್ ಶಾಸಕ‌ ಸುಬ್ಬಾರೆಡ್ಡಿ ನಿವಾಸದ ಮೇಲೆ ಇ.ಡಿ ದಾಳಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 16:01 IST
Last Updated 10 ಜುಲೈ 2025, 16:01 IST
ಎಸ್‌.ಎನ್.ಸುಬ್ಬಾರೆಡ್ಡಿ (ಕಾಂಗ್ರೆಸ್) ಬಾಗೇಪಲ್ಲಿ
  
ಎಸ್‌.ಎನ್.ಸುಬ್ಬಾರೆಡ್ಡಿ (ಕಾಂಗ್ರೆಸ್) ಬಾಗೇಪಲ್ಲಿ      

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಯಮಗಳ ಉಲ್ಲಂಘನೆ ಪ್ರಕರಣದಲ್ಲಿ ಬಾಗೇಪಲ್ಲಿ ಶಾಸಕ, ಕಾಂಗ್ರೆಸ್‌ನ ಎಸ್‌.ಎನ್‌.ಸುಬ್ಬಾರೆಡ್ಡಿ ಅವರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ಮಾರತ್‌ಹಳ್ಳಿಯಲ್ಲಿರುವ ಸುಬ್ಬಾರೆಡ್ಡಿ ಅವರ ಮನೆ, ಕಚೇರಿ ಸೇರಿ ಒಟ್ಟು ಐದು ಕಡೆ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಮಾರತ್‌ಹಳ್ಳಿಯ ನಿವಾಸದಲ್ಲಿ ದಾಳಿ ನಡೆಸಿದ ವೇಳೆ ಸುಬ್ಬಾರೆಡ್ಡಿ ಮತ್ತು ಕುಟುಂಬದವರು ಮನೆಯಲ್ಲಿಯೇ ಇದ್ದರು ಎಂದು ಮೂಲಗಳು ಖಚಿತಪಡಿಸಿವೆ.

ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷರೂ ಆಗಿರುವ ಸುಬ್ಬಾರೆಡ್ಡಿ ಅವರು, ರಿಯಲ್‌ ಎಸ್ಟೇಟ್‌ ಉದ್ಯಮಿಯೂ ಹೌದು. ಮಾರತ್‌ಹಳ್ಳಿಯ ಅವರ ಕಚೇರಿಯಲ್ಲಿ ಶೋಧ ನಡೆಸಿ, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಮಾರತ್‌ಹಳ್ಳಿಯ ಸಿಕೆಬಿ ಬಡಾವಣೆಯಲ್ಲಿ ಸುಬ್ಬಾರೆಡ್ಡಿ ಅವರ ಕುಟುಂಬವು ‘ಭಗಿನಿ ಹಾಸ್ಪಿಟಾಲಿಟೀಸ್‌ ಪ್ರೈವೇಟ್‌ ಲಿಮಿಟೆಡ್‌’ ಎಂಬ ಐಷಾರಾಮಿ ಹೋಟೆಲ್ ಮತ್ತು ಪಾರ್ಟಿ ಹಾಲ್‌ ನಡೆಸುತ್ತಿದೆ. ಅಲ್ಲಿಯೂ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು, ಹೋಟೆಲ್‌ನ ಲೆಕ್ಕಪತ್ರಗಳ ವಿವರ ಇದ್ದ ಹಾರ್ಡ್‌ ಡಿಸ್ಕ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಜತೆಗೆ ಹೋಟೆಲ್‌ನ ಆಡಳಿತ ವಿಭಾಗದ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ ಎಂದು ವಿವರಿಸಿವೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಯಮಗಳ ಉಲ್ಲಂಘನೆ ಸಂಬಂಧ ದೇಶದಾದ್ಯಂತ ಗುರುವಾರ ಹಲವು ಉದ್ಯಮಿಗಳ ಮನೆ ಮತ್ತು ಕಚೇರಿಗಳು ಸೇರಿ ಒಟ್ಟು 37 ಕಡೆ ಇ.ಡಿ ದಾಳಿ ನಡೆಸಿದೆ. ಅದರ ಭಾಗವಾಗಿಯೇ ಸುಬ್ಬಾರೆಡ್ಡಿ ಅವರ ಮನೆ– ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ. ಆದರೆ, ಅವರ ಬಾಗೇಪಲ್ಲಿ ನಿವಾಸ ಮತ್ತು ಕೋಲಾರದಲ್ಲಿನ ಕಚೇರಿಗಳ ಮೇಲೆ ದಾಳಿ ನಡೆದಿಲ್ಲ.

ಗುರುವಾರ ರಾತ್ರಿಯ ಕೆಲವು ಕಡೆ ಶೋಧ ಮುಂದುವರೆದಿದ್ದು, ಅಗತ್ಯಬಿದ್ದರೆ ಸುಬ್ಬಾರೆಡ್ಡಿ ಮತ್ತು ಅವರ ಕುಟುಂಬದವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಇ.ಡಿ ಮೂಲಗಳು ತಿಳಿಸಿವೆ.

ಶೋಧದ ವಿವರ

  • ಸುಬ್ಬಾರೆಡ್ಡಿ ಅವರು ಮಲೇಷ್ಯಾ ಹಾಂಗ್‌ಕಾಂಗ್‌ ಮತ್ತು ಜರ್ಮನಿಯಲ್ಲಿ ಆಸ್ತಿಗಳನ್ನು ಖರೀದಿಸಿದ್ದು ಈ ಬಗ್ಗೆ ಸರ್ಕಾರಕ್ಕೆ ಅಗತ್ಯ ಮಾಹಿತಿ ನೀಡಿಲ್ಲ

  • ಈ ದೇಶಗಳಲ್ಲಿ ಉದ್ಯಮಗಳನ್ನು ನಡೆಸುತ್ತಿದ್ದು ಅಲ್ಲಿನ ಹಣಕಾಸು ವ್ಯವಹಾರದ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ

  • ಭಾರತದಿಂದ ಹಣ ವರ್ಗಾವಣೆ ಮಾಡಿ ವಿದೇಶಗಳಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಆದರೆ ಅವುಗಳನ್ನು ತಮ್ಮ ಸಂಬಂಧಿಗಳ ಹೆಸರಿನಲ್ಲಿ ನೋಂದಣಿ ಮಾಡಿದ್ದಾರೆ

  • ಶೋಧದ ವೇಳೆ ಆಸ್ತಿ ಖರೀದಿ ಉದ್ಯಮ ವ್ಯವಹಾರಗಳು ಮತ್ತು ಕಾರುಗಳ ಖರೀದಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ

ಪ್ರದೀಪ್ ಈಶ್ವರ್ ಆಪ್ತನ ಮನೆಯಲ್ಲಿ ಶೋಧ
ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್ ಅವರ ಆಪ್ತ ಜೋಳದ ಕಿಟ್ಟಪ್ಪ ಅವರ ಮನೆಯಲ್ಲಿ ರೆವಿನ್ಯು ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕೃಷ್ಣಪ್ಪ ಅಲಿಯಾಸ್‌ ಜೋಳದ ಕಿಟ್ಟಪ್ಪ ಅವರು ಜೋಳದ ರಫ್ತು ಉದ್ಯಮ ನಡೆಸುತ್ತಿದ್ದಾರೆ. ರಫ್ತು ವ್ಯವಹಾರದಲ್ಲಿ ತೆರಿಗೆ ವಂಚನೆ ಬಗ್ಗೆ ದೂರುಗಳು ಬಂದಿದ್ದು ಅದರ ಆಧಾರದಲ್ಲಿ ಶೋಧ ನಡೆಸಲಾಗಿದೆ. ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ ದಾಖಲೆಗಳು ರಫ್ತು ಉದ್ಯಮದ ಲೆಕ್ಕಪತ್ರಗಳನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.