ಬೆಂಗಳೂರು: ಐಶ್ವರ್ಯ ಗೌಡ ಅವರು ₹9.82 ಕೋಟಿ ಮೊತ್ತದ ಚಿನ್ನಾಭರಣ ವಂಚಿಸಿದ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುರೇಶ್ ಅವರ ಮನೆಗೆ ತೆರಳಿದ್ದ ಇ.ಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಸ್ವತಃ ಸುರೇಶ್ ಅವರು ಸಮನ್ಸ್ ಪಡೆದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಐಶ್ವರ್ಯ ಗೌಡ ಅವರು ಡಿ.ಕೆ.ಸುರೇಶ್ ಅವರ ಹೆಸರು ಹೇಳಿ ಚಿನ್ನಾಭರಣ ವ್ಯಾಪಾರಿಗಳಿಂದ ಚಿನ್ನ ಪಡೆದುಕೊಂಡಿದ್ದರು. ಆ ಚಿನ್ನವನ್ನು ವಾಪಸ್ ಮಾಡಿರಲಿಲ್ಲ ಮತ್ತು ಹಣವನ್ನೂ ನೀಡಿರಲಿಲ್ಲ ಎಂದು ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಈಚೆಗೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಬೆಂಗಳೂರು ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಐಶ್ವರ್ಯ ಅವರು ಈಗ ಇ.ಡಿ ಬಂಧನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.