ADVERTISEMENT

ಬಾಣಗೆರೆ: ಶತಮಾನದ ಶಾಲೆಗೆ ಬೇಕಿದೆ ಕಾಯಕಲ್ಪ

ಕೊಠಡಿಗಳು ಶಿಥಿಲ, ಸೌಲಭ್ಯ ಕೊರತೆ

ವಿಶ್ವನಾಥ ಡಿ.
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
ಹರಪನಹಳ್ಳಿ ಪಟ್ಟಣದ ಬಾಣಗೆರೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಪಾಳು ಬಿದ್ದಿದ್ದು, ದುರಸ್ತಿ ಕಾಣಬೇಕಿದೆ. 
ಹರಪನಹಳ್ಳಿ ಪಟ್ಟಣದ ಬಾಣಗೆರೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಪಾಳು ಬಿದ್ದಿದ್ದು, ದುರಸ್ತಿ ಕಾಣಬೇಕಿದೆ.    

ಹರಪನಹಳ್ಳಿ (ವಿಜಯನಗರ ಜಿಲ್ಲೆ):  ಸಾಹಿತಿ ‘ಬೀಚಿ’ (ರಾಯಸಂ ಭೀಮಸೇನ ರಾವ್) ಅವರು ಓದಿದ್ದ ಶಾಲೆ ಶಿಥಿಲಗೊಂಡಿದ್ದು ಕಾಯಕಲ್ಪದ ನಿರೀಕ್ಷೆಯಲ್ಲಿದೆ. ಬಾಣಗೆರೆಯಲ್ಲಿ 1903ರಲ್ಲಿ ಸ್ಥಾಪಿತ ಬಾಲಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 122 ವರ್ಷ ಗತಿಸಿದೆ. 

1 ರಿಂದ 8ನೇ ತರಗತಿಯವರೆಗಿನ ಈ ಶಾಲೆಯಲ್ಲಿ 152 ವಿದ್ಯಾರ್ಥಿಗಳಿದ್ದಾರೆ. ಏಳು ಶಿಕ್ಷಕರು ಇದ್ದಾರೆ. ಒಟ್ಟು 17 ಕೊಠಡಿಗಳಿದ್ದು, ಅದರಲ್ಲಿ 4 ಕೊಠಡಿ ಉತ್ತಮ ಸ್ಥಿತಿಯಲ್ಲಿವೆ. ಉಳಿದ ಕೊಠಡಿ ದುರಸ್ತಿ ಆಗಬೇಕಿದೆ. ತರಗತಿ ಕೋಣೆಯಲ್ಲಿಯೇ ಬಿಸಿಊಟದ ಅಡುಗೆ ಸಿದ್ಧತೆಯೂ ನಡೆಯುತ್ತದೆ.

‘ಶಿಥಿಲ ಸ್ಥಿತಿಯಲ್ಲಿರುವ ಕಟ್ಟಡದ ಕೊಠಡಿಗಳು ಪಾಳು ಬಿದ್ದಿವೆ. ಕೊಂಚ ಸುಸ್ಥಿತಿಯಲ್ಲಿರುವ ಕಟ್ಟಡದ ಕೊಠಡಿಗಳಲ್ಲಿ ತರಗತಿಗಳನ್ನು ನಡೆಯುತ್ತಿವೆ. ಪಾಳು ಬಿದ್ದಿರುವ ಕೊಠಡಿಗಳನ್ನು ದುರಸ್ತಿಗೊಳಿಸಿದರೆ, ಹೆಚ್ಚು ಸ್ಥಳಾವಕಾಶ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲು ಅನುಕೂಲವಾಗುತ್ತದೆ’ ಎಂದು ಗ್ರಾಮಸ್ಥರು ತಿಳಿಸಿದರು.

ADVERTISEMENT

ಶಾಲಾವರಣದಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇದ್ದರೂ ಜನರು ಮಾತ್ರ ಘನತ್ಯಾಜ್ಯವನ್ನು ಶಾಲಾವರಣದಲ್ಲಿ ಬೀಸಾಡುತ್ತಾರೆ. ಇದರಿಂದ ಶಾಲಾ ಪರಿಸರವೇ ಹದಗೆಟ್ಟಿದೆ.

‘ಶಾಲೆಯ ಕಟ್ಟಡದ ಕೊರತೆ, ಸ್ವಚ್ಛತೆಯಿಂದ ವಂಚಿತವಾಗಿದೆ. ಇದರಿಂದ ಶಾಲೆಯಲ್ಲಿ ದಾಖಲಾತಿ ಪ್ರಮಾಣ ಇಳಿಮುಖವಾಗಿದೆ. 1ನೇ ತರಗತಿ ಪ್ರವೇಶಕ್ಕೆ ಈವರೆಗೆ 6 ಅರ್ಜಿಗಳು ಮಾತ್ರ ಬಂದಿವೆ. ಶಾಲೆಗೆ ಅಗತ್ಯವಿರುವ 4 ಹೊಸ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬ್ರಿಟಿಷ್ ಕಾಲದ ಕಟ್ಟಡ ಸುರಕ್ಷತೆ ಬಗ್ಗೆಯೂ ಮನವಿ ಸಲ್ಲಿಸಲಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್.ಶಫಿವುಲ್ಲಾ ತಿಳಿಸಿದರು.

‘ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಮಕ್ಕಳನ್ನು ಈ ಶಾಲೆಗೆ ಕಳಿಸಿದಾಗ ಕಟ್ಟಡ ಬಿದ್ದು ಅನಾಹುತ ಸಂಭವಿಸಿದರೆ ಹೊಣೆ ಯಾರು? ಕಟ್ಟಡ ಸರಿಪಡಿಸಿದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಯೋಚಿಸಬಹುದು’ ಎಂದು ಸುತ್ತಮುತ್ತ ವಾಸವಾಗಿರುವ ಬಾಣಗೆರೆ ಗ್ರಾಮಸ್ಥರು ತಿಳಿಸಿದರು. 

ಶತಮಾನ ಪೂರೈಸಿದ ಶಾಲೆಯಲ್ಲಿ ಓದಿದವರು ಸಾವಿರಾರು ಮಂದಿ ಉನ್ನತ ಸಾಧನೆ ಮಾಡಿದ್ದಾರೆ. ಈ ಶಾಲೆಯ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.
–ಜಾಕೀರ್ ಹುಸೇನ್, ಸದಸ್ಯ ಪುರಸಭೆ
ತಾಲ್ಲೂಕಿನಲ್ಲಿ ವಿವಿಧ ಶಾಲೆಗಳ 410 ಕೊಠಡಿ ದುರಸ್ತಿ ಹಂತದಲ್ಲಿವೆ. 212 ಕೊಠಡಿಗಳ ದುರಸ್ತಿ ಪೂರ್ಣವಾಗಿದೆ. ಉಳಿದ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ.
–ಎಚ್.ಲೇಪಾಕ್ಷಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಹರಪನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.