ADVERTISEMENT

ಟೈಲರ್‌ ಮಕ್ಕಳಿಗೂ ವಿದ್ಯಾನಿಧಿ: ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ

ಕೊಪ್ಪ: ಜನಸಂಕಲ್ಪ ಸಮಾವೇಶದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 18:37 IST
Last Updated 27 ನವೆಂಬರ್ 2022, 18:37 IST
   

ಕೊಪ್ಪ (ಚಿಕ್ಕಮಗಳೂರು): ‘ರೈತರ ಮಕ್ಕಳಿಗೆ ಜಾರಿಗೊಳಿಸಿರುವ ವಿದ್ಯಾನಿಧಿ ಯೋಜನೆ ಸವಲತ್ತನ್ನು ಟೈಲರ್‌ಗಳ ಮಕ್ಕಳಿಗೂ ವಿಸ್ತರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೊಪ್ಪದಲ್ಲಿ ಭಾನುವಾರ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಟೈಲರ್‌ ಮಕ್ಕಳಿಗೂ ಯೋಜನೆಯನ್ನು ವಿಸ್ತರಿಸಬೇಕು ಎಂದು ಇಲ್ಲಿನವರು ಮನವಿ ಸಲ್ಲಿಸಿದ್ದಾರೆ. ಆ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ’ ಎಂದು ತಿಳಿಸಿದರು.

ಕಾಡಾನೆ ದಾಳಿಯಿಂದ ಸಾವಿ ಗೀಡಾದ ವ್ಯಕ್ತಿಯ ಕುಟುಂಬಕ್ಕೆ ನೀಡುವ ಪರಿಹಾರವನ್ನು ₹7.5 ಲಕ್ಷದಿಂದ ₹15 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಆನೆ ಉಪಟಳ ನಿಯಂತ್ರಣಕ್ಕೆ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಹಾಗೂ 50 ಮಂದಿಯ ದಳ ನೇಮಕಕ್ಕೆ ಕ್ರಮವಹಿಸಲಾಗಿದೆ ಎಂದು ಹೇಳಿದರು.

ADVERTISEMENT

‘ಈ ಕ್ಷೇತ್ರದ (ಶೃಂಗೇರಿಯ) ಶಾಸಕ (ಟಿ.ಡಿ. ರಾಜೇಗೌಡ) ವಿರುದ್ಧ ಭ್ರಷ್ಟಾಚಾರ ದೂರು ದಾಖಲಾಗಿದೆ. ದೂರುದಾರರಿಗೆ ಆಮಿಷವೊಡ್ಡಿ ಪ್ರಕರಣವನ್ನು ವಾಪಸ್‌ ಪಡೆಸುವ ತಂತ್ರ ನಡೆದಿದೆ’ ಎಂದು ಅವರು ಆರೋಪಿಸಿದರು.

ದತ್ತ ಪೀಠಕ್ಕೆ ಶೀಘ್ರ ಪರಿಹಾರ: ದತ್ತ ಪೀಠದಲ್ಲಿ ಪೂಜೆ ವಿಚಾರವಾಗಿ ಶಾಸಕ ಸಿ.ಟಿ. ರವಿ ನೇತೃತ್ವದಲ್ಲಿ ಸುದೀರ್ಘ ಹೋರಾಟ ನಡೆದಿದೆ. ಹೋರಾಟದ ಪ್ರತಿಫಲವಾಗಿ ಒಳ್ಳೆಯ ದಿನಗಳು ಬಂದಿವೆ, ಕಾನೂನಾತ್ಮಕವಾಗಿಯೂ ಒಂದು ಹಂತಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಪರಿಹಾರ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.