
ಬೆಂಗಳೂರು: ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ಕೇಂದ್ರ ಮಂಡಳಿಗಳ ಮಾದರಿಯಲ್ಲೇ ರಾಜ್ಯದ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷಾ ಪದ್ಧತಿ ಜಾರಿಗೊಳಿಸಿರುವ ಶಾಲಾ ಶಿಕ್ಷಣ ಇಲಾಖೆಯ ನಡೆ, ಶೋಷಿತ ವರ್ಗಕ್ಕೆ ಸಮಾನತೆ ಕಲ್ಪಿಸುವ ಶೈಕ್ಷಣಿಕ ಮಾನದಂಡವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ.
ರಾಜ್ಯಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಪರೀಕ್ಷಾ ತಾರತಮ್ಯವನ್ನು ಶಿಕ್ಷಣ ಇಲಾಖೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿವಾರಿಸಿವೆ. ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶಗಳನ್ನು ಒದಗಿಸುವುದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯ. ಒಂದೇ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕೇಂದ್ರ ಪಠ್ಯಕ್ರಮ ಓದುವ ವಿದ್ಯಾರ್ಥಿಗಳಿಗೆ ಒಂದು ಮಾದರಿ ಪರೀಕ್ಷೆ, ರಾಜ್ಯ ಪಠ್ಯಕ್ರಮ ಓದುವ ವಿದ್ಯಾರ್ಥಿಗಳಿಗೆ ಮತ್ತೊಂದು ಮಾದರಿ ಪರೀಕ್ಷೆ ನಡೆಸುವುದು ಅಸಮಾನತೆಯ ಭಾಗವಾಗಿದೆ. ಇಂತಹ ನ್ಯೂನತೆಯನ್ನು ಕೊನೆಗೂ ಸರಿಪಡಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಇದುವರೆಗೂ ಇದ್ದ ನಿಯಮ ಪ್ರಕಾರ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯ ಪ್ರತಿ ವಿಷಯದಲ್ಲೂ 28 ಅಂಕ ಪಡೆಯುವುದು ಕಡ್ಡಾಯವಾಗಿತ್ತು. ಒಂದು–ಎರಡು ಅಂಕ ಕಡಿಮೆ ಪಡೆದರೂ ಆ ವಿದ್ಯಾರ್ಥಿ ಅನುತ್ತೀರ್ಣನಾಗುತ್ತಿದ್ದ. ಅದಕ್ಕಾಗಿ ಕೆಲವರು ಶಿಕ್ಷಣವನ್ನೇ ತೊರೆದಿದ್ದಾರೆ. ಇದನ್ನು ಸರಿದೂಗಿಸಲು ನೀಡುತ್ತಿದ್ದ ಕೃಪಾಂಕ ವ್ಯಾಪಕ ಟೀಕೆಗೂ ಗುರಿಯಾಗಿತ್ತು. ನೆರೆಯ ಕೇರಳದಲ್ಲಿ ತೇರ್ಗಡೆಗೆ ಶೇ 30 ಅಂಕ ಪಡೆದರೆ ಸಾಕು. ಕೇಂದ್ರ ಮಂಡಳಿಗಳಲ್ಲಿ ಶೇ 33 ಇದೆ. ಎಲ್ಲ ರಾಜ್ಯಗಳ ವಿದ್ಯಾರ್ಥಿಗಳ ಜತೆ ಸ್ಪರ್ಧಿಸಲು, ಅವರ ಕೈಕೆಳಗೆ ಕೆಲಸ ಮಾಡುವುದನ್ನು ತಪ್ಪಿಸಲು ಸಮಾನ ಪರೀಕ್ಷಾ ಪದ್ಧತಿ ಅಗತ್ಯ. ಸರ್ಕಾರದ ಒಂದು ನಿರ್ಧಾರ ರಾಜ್ಯದ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ಹೇಳಿದ್ದಾರೆ.
ಕೆಲ ವ್ಯಕ್ತಿಗಳು ವಿಷಯದ ಆಳವನ್ನು ಅರಿಯದೆ ತಪ್ಪು ಮಾಹಿತಿ ನೀಡಿ ನಕಾರಾತ್ಮಕ ಪ್ರಚಾರ ಮಾಡುತ್ತಿದ್ದಾರೆ. ಈ ನೀತಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಲಾಗಿತ್ತು. ಅವರ ಅಭಿಪ್ರಾಯ, ಶಿಕ್ಷಣ ತಜ್ಞರು ಮತ್ತು ಕ್ಷೇತ್ರ ಪರಿಣತರ ಸಲಹೆ ಪಡೆದು ಅಂತಿಮಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.