ADVERTISEMENT

ಅಭ್ಯರ್ಥಿಗಳೆದುರು ಶಾಲಾಭಿವೃದ್ಧಿ ಬೇಡಿಕೆ ಇಡಿ: ಪ್ರೊ.ಎಂ.ಆರ್. ದೊರೆಸ್ವಾಮಿ

ಮುಂದಿನ ಮೂರು ವರ್ಷಗಳಲ್ಲಿ 35 ಸಾವಿರ ಶಾಲೆ ದತ್ತು ಗುರಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 19:30 IST
Last Updated 19 ಡಿಸೆಂಬರ್ 2020, 19:30 IST
ಡಾ. ಎಂ.ಆರ್.ದೊರೆಸ್ವಾಮಿ
ಡಾ. ಎಂ.ಆರ್.ದೊರೆಸ್ವಾಮಿ   

ಬೆಂಗಳೂರು: ‘ಗ್ರಾಮದ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡುವ ಭರವಸೆ ನೀಡಿದವರಿಗೆ ಮತ ಹಾಕುತ್ತೇವೆ ಎಂದು ಮತದಾರರು ಹೇಳಬೇಕು. ದೇಗುಲ ನಿರ್ಮಾಣಕ್ಕಿಂತಲೂ ಶಾಲೆಗಳ ಅಭಿವೃದ್ಧಿಗೊಳಿಸುತ್ತೇವೆ ಎಂದು ಅಭ್ಯರ್ಥಿಗಳೂ ಮಾತು ಕೊಡಬೇಕು’ ಎಂದು ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಸಲಹೆ ನೀಡಿದರು.

‘ಶೈಕ್ಷಣಿಕ ಸುಧಾರಣೆಗೆ ಸಂಬಂಧಿಸಿದಂತೆ ರಾಜ್ಯಸರ್ಕಾರಕ್ಕೆ ಸಲ್ಲಿಸಿರುವ 18 ಶಿಫಾರಸುಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸಿ, ಜಾರಿಗೆ ತರಲು ರಾಜ್ಯಸರ್ಕಾರ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

‘ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು ಎಂಬ ಬೇಡಿಕೆಗೆ ಬಹುತೇಕರು ಸ್ಪಂದಿಸಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್ , ರಾಜ್ಯಸಭೆ–ಲೋಕಸಭೆ ಸದಸ್ಯರು ಹಾಗೂ ವಿಶ್ವವಿದ್ಯಾಲಯಗಳು, ಇತರೆ ಸಂಘ–ಸಂಸ್ಥೆಗಳು ಈವರೆಗೆ 1,442 ಶಾಲೆಗಳನ್ನು ದತ್ತು ತೆಗೆದುಕೊಂಡಿವೆ. ಜನಪ್ರತಿನಿಧಿಗಳ ಜೊತೆಗೆ, ಖಾಸಗಿ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಮಾಹಿತಿ ತಂತ್ರಜ್ಞಾನ ಕಂಪನಿಗಳು, ದೊಡ್ಡ ಉದ್ಯಮಿಗಳ ಸಹಕಾರದಿಂದ ಮುಂದಿನ ಮೂರು ವರ್ಷಗಳಲ್ಲಿ 35 ಸಾವಿರ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳುವಂತೆ ಮಾಡುವ ಉದ್ದೇಶವಿದೆ’ ಎಂದು ಅವರು ಹೇಳಿದರು.

ADVERTISEMENT

‘ಕಾರ್ಪೊರೇಟ್‌ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಶೇ 2ರಷ್ಟು ಹಣವನ್ನು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸುತ್ತವೆ. ಶೇ 2ರಷ್ಟು ಎಂದರೂ ನೂರಾರು ಕೋಟಿ ರೂಪಾಯಿಯಾಗುತ್ತದೆ. ಈ ಮೊತ್ತವನ್ನು ಸಂಪೂರ್ಣವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಬೇಕು. ಈ ನಿಟ್ಟಿನಲ್ಲಿ ಐಟಿ ಕಂಪನಿಗಳ ಸಭೆ ಕರೆಯುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದೂ ತಿಳಿಸಿದರು.

ನನ್ನ ಶಾಲೆ, ನನ್ನ ಕೊಡುಗೆ: ಈ ಕಾರ್ಯಕ್ರಮದ ಅಡಿಯಲ್ಲಿ ಆಯಾ ಶಾಲೆಯ ಹಳೆಯ ವಿದ್ಯಾರ್ಥಿಗಳು, ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಆ ಊರಿನ ಶ್ರೀಮಂತರು, ಉದ್ಯಮಿಗಳು ಮತ್ತು ಆಸಕ್ತರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಓದಿರುವ ಶಾಲೆಗಳನ್ನು ಸರ್ಕಾರವು ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಬೇಕು’ ಎಂದು ಅವರು ಹೇಳಿದರು.

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಗ್ರಾಮೀಣ ಭಾಗದಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸುವುದಾಗಿ ಜಾಹೀರಾತು ನೀಡುತ್ತಿದೆ. ಸಂಬಂಧಿಸಿದ ಶಾಲಾ ಅಭಿವೃದ್ಧಿ ಸಂಸ್ಥೆಗಳು (ಎಸ್‌ಡಿಎಂಸಿ) ಈ ಕುರಿತು ಇಲಾಖೆಗೆ ಅರ್ಜಿ ಸಲ್ಲಿಸಬೇಕು. ನಮ್ಮ ಕಚೇರಿಗೆ (ಶಿಕ್ಷಣ ಸಲಹೆಗಾರರ ಕಚೇರಿ) ಕಳಿಸಿದರೆ ಸಂಬಂಧಪಟ್ಟವರಿಗೆ ಅದನ್ನು ಕಳುಹಿಸಲಾಗುವುದು’ ಎಂದು ದೊರೆಸ್ವಾಮಿ ತಿಳಿಸಿದರು.

‘ಪ್ರಜಾವಾಣಿ’ ವರದಿಗೆ ಶ್ಲಾಘನೆ
‘ಸರ್ಕಾರಿ ಶಾಲೆಗಳಿಗೆ ಬಿಡಿಗಾಸು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ನ.29ರಂದು ಪ್ರಕಟವಾದ ವರದಿಯನ್ನು ಶ್ಲಾಘಿಸಿದ ಪ್ರೊ. ದೊರೆಸ್ವಾಮಿ, ‘ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಸರ್ಕಾರಿ ಶಾಲೆಗೆ ಬಳಸಿದವರ ಸಂಖ್ಯೆ ಅತ್ಯಲ್ಪ ಎಂಬುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಸರ್ಕಾರಿ ಶಾಲೆಗಳ ಬಗ್ಗೆ ಮುಖಪುಟದಲ್ಲಿ ಪ್ರಕಟಿಸುವ ಮೂಲಕ ಪತ್ರಿಕೆ ಸಾಮಾಜಿಕ ಬದ್ಧತೆ ಮೆರೆದಿದೆ’ ಎಂದು ಹೇಳಿದರು.

‘ವರದಿಯಲ್ಲಿ ಗಮನ ಸೆಳೆದಿರುವಂತೆ, ಈವರೆಗೆ ಬಳಕೆಯಾಗದೆ ಉಳಿದಿರುವ ₹683.61 ಕೋಟಿಯನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್ ಅವರಿಗೆ ಮನವಿ ಸಲ್ಲಿಸಲಾಯಿತು. ತಕ್ಷಣಕ್ಕೆ ಸ್ಪಂದಿಸಿದ ಅವರು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.