ADVERTISEMENT

ಚಕ್ರತೀರ್ಥ ಸಮಿತಿಗೆ ಪಿಯು ಪಠ್ಯ ಪರಿಷ್ಕರಣೆ ಹೊಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 18:56 IST
Last Updated 23 ಮೇ 2022, 18:56 IST
   

ಬೆಂಗಳೂರು: ದ್ವಿತೀಯ ಪಿಯುಸಿಯ ಇತಿಹಾಸ ವಿಷಯದ ಪಠ್ಯಪುಸ್ತಕ ಪರಿಷ್ಕರಣೆಗೆ ಶಿಕ್ಷಣ ಇಲಾಖೆ ಚಾಲನೆ ನೀಡಿದೆ. ಪರಿಷ್ಕರಣೆಯ ಕಾರ್ಯವನ್ನು ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿಗೆ ವಹಿಸಲಾಗಿದೆ.

ಶಾಲಾ ಪಠ್ಯಪುಸ್ತಕಗಳ ವಿವಾದದ ಬೆನ್ನಲ್ಲೇ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ದ್ವಿತೀಯ ಪಿಯುಸಿ ಕಲಾ ವಿಭಾಗದ ಭಾರತದ ಇತಿಹಾಸ ಅಧ್ಯಯನ ಪಠ್ಯ ಪುಸ್ತಕದ ಪರಿಷ್ಕರಣೆಯನ್ನು ಕೈಗೊಳ್ಳುವಂತೆ ಸಮಿತಿಗೆ ಸೂಚಿಸಲಾಗಿದೆ.

ಕರ್ನಾಟಕದ ಬಗ್ಗೆ ವಿಶೇಷ ಉಲ್ಲೇಖ ಇರುವ ಭಾರತದ ಇತಿಹಾಸ ಅಧ್ಯಾಯದ 4.2 ರ ‘ಹೊಸ ಧರ್ಮಗಳ ಉದಯ’ ಪಠ್ಯಭಾಗವನ್ನು ಪರಿಷ್ಕರಣೆ ಕೈಗೊಳ್ಳುವಂತೆ ಇದೇ ವರ್ಷ ಫೆಬ್ರುವರಿ 17 ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್‌ ಪತ್ರ ಬರೆದಿದ್ದರು.

ADVERTISEMENT

‘ದ್ವಿತೀಯ ಪಿಯುಸಿ ಇತಿಹಾಸ ವಿಭಾಗಕ್ಕೆ ನಿಗದಿಪಡಿಸಿದ ಹೊಸ ಧರ್ಮಗಳ ಉದಯ ಪಠ್ಯದಲ್ಲಿ ನಿರ್ದಿಷ್ಟ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯಗಳಿರುವ ಬಗ್ಗೆ ದೂರುಗಳು ಬಂದಿವೆ. ಈ ಪಠ್ಯಭಾಗವನ್ನು ಪರಿಶೀಲಿಸಿ ಸೂಕ್ತವಾಗಿ ಪರಿಷ್ಕರಿಸುವ ಹೊಣೆಗಾರಿಕೆಯನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಬೇಕು ಹಾಗೂ ಪರಿಷ್ಕೃತ ಪಠ್ಯಪುಸ್ತಕವನ್ನು 2022–23 ನೇ ಸಾಲಿನಲ್ಲಿ ಮುದ್ರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದರು.

ಸಚಿವರ ಪತ್ರಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸಕಾರಾತ್ಮಕವಾಗಿ ಉತ್ತರ ನೀಡಿದ್ದರು. ಸಚಿವರ ಸೂಚನೆಯಂತೆ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕ ರಚನಾ ಸಮಿತಿಗೆ ಮಾಹಿತಿ ಸಲ್ಲಿಸಿ ಅಭಿಪ್ರಾಯ ಕೋರಿದ್ದರು. ಈ ಬಗ್ಗೆ ಚರ್ಚಿಸಿದ್ದ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಪ‍್ರಸ್ತಾಪಿಸಿರುವ ಅಂಶಗಳಲ್ಲಿ ಯಾವುದೇ ವಿವಾದಿತ ಅಂಶಗಳಿಲ್ಲ. ಆದರೆ, ಇಲಾಖೆ ಈ ಅಂಶಗಳ ಬಗ್ಗೆ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಸಮಿತಿಯು ಅಭ್ಯಂತರ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದರು.

ಈ ವಿಷಯವನ್ನು ಉಲ್ಲೇಖಿಸಿ ಸಚಿವರಿಗೆ ಪತ್ರ ಬರೆದಿದ್ದ ನಿರ್ದೇಶಕರು, ’ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಅನುಗುಣವಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಆಧರಿಸಿ ಪಠ್ಯಕ್ರಮ ರಚಿಸಲಾಗುವುದು. ಯಾವುದೇ ವಿವಾದಿತ ಅಂಶಗಳಿಲ್ಲದಂತೆ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದರು. ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ. ನಾಗೇಶ್‌, ‘ಪದವಿಪೂರ್ವ ತರಗತಿಯ ಪಠ್ಯಗಳನ್ನು ಸಹ ಖಂಡಿತ ಪರಿಷ್ಕರಣೆ ಮಾಡುತ್ತೇವೆ. ಒಂದು ಅಧ್ಯಾಯದಲ್ಲಿ ಆಕ್ಷೇಪಾರ್ಹ ವಿಷಯಗಳಿವೆ. ಇದನ್ನು ಸರಿಪಡಿಸಬೇಕಾಗಿದೆ. ಹೀಗಾಗಿ, ಇದನ್ನು ಪುನರ್‌ ಪರಷ್ಕರಿಸಲಾಗುವುದು. ರೋಹಿತ್‌ ನೇತೃತ್ವದ ಸಮಿತಿಗೆ ಜವಾಬ್ದಾರಿ ನೀಡಲಾಗಿದೆ’ ಎಂದರು.

‘ಗಾಂಧಿ, ಕುವೆಂಪು ಪಾಠ ಬಿಟ್ಟಿದ್ದ ಬರಗೂರು’
ಬೆಂಗಳೂರು:
ಪಠ್ಯದಲ್ಲಿ ನೈಜ ಇತಿಹಾಸ ಬಿಂಬಿಸಿದ್ದೇವೆ. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ಯವರು ಮಹಾತ್ಮ ಗಾಂಧಿ, ಬಾಬಾ ಸಾಹೇಬ್‌ ಅಂಬೇಡ್ಕರ್‌, ಮೈಸೂರು ಮಹಾರಾಜರು, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕ, ಕುವೆಂಪು ಮುಂತಾದ ಮಹನೀಯರ ಪಾಠಗಳನ್ನು ಕೈ ಬಿಟ್ಟಿದ್ದರು. ಆ ಅನ್ಯಾಯ ಸರಿಪಡಿಸುವ ಕೆಲಸ ಮಾಡಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಈಗ ಪಠ್ಯ ಪುಸ್ತಕದ ಬ್ರಾಹ್ಮಣೀಕರಣ ಆಗಿದೆ ಎಂದು ಪ್ರಗತಿಪರರುಮತ್ತು ಕಾಂಗ್ರೆಸ್‌ನವರು ಹುಯಿಲೆಬ್ಬಿಸಿದ್ದಾರೆ. ಬರಗೂರು ಪರಿಷ್ಕರಿಸಿದ ಪಠ್ಯಪುಸ್ತಕಗಳಲ್ಲಿ 19 ಜನ ಬ್ರಾಹ್ಮಣ ಲೇಖಕರ ಪಠ್ಯಗಳಿದ್ದವು. ಹಾಗಿದ್ದರೆ, ಅದು ಬ್ರಾಹ್ಮಣ್ಯವಲ್ಲವೇ? ಪ್ರಗತಿಪರರ ಕಣ್ಣಿಗೆ ಅದೇಕೆ ಕಾಣಿಸಿಲ್ಲ? ಲೇಖಕರಿಗೆ ಜಾತಿಹಣೆ ಪಟ್ಟಿ ಹಚ್ಚುವುದು ಸರಿಯಲ್ಲ ಎಂದು ಅವರು ಸೋಮವಾರಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.