ADVERTISEMENT

‘ದೆಹಲಿ’ ಶಿಕ್ಷಣ ವ್ಯವಸ್ಥೆಯತ್ತ ಸಚಿವರ ಚಿತ್ತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 19:40 IST
Last Updated 26 ಜೂನ್ 2019, 19:40 IST
   

ಬೆಂಗಳೂರು: ದೆಹಲಿ ಮತ್ತು ಕೇರಳ ರಾಜ್ಯಗಳ ಶಿಕ್ಷಣ ವ್ಯವಸ್ಥೆಯ ಕೆಲವು ಉತ್ತಮ ಅಂಶಗಳನ್ನು ಸೇರಿಸಿ ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲೂ ಆಮೂಲಾಗ್ರ ಬದಲಾವಣೆ ಮಾಡುವ ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಆರ್‌. ಶ್ರೀನಿವಾಸ ತಿಳಿಸಿದರು.

ಈ ಉದ್ದೇಶದಿಂದದೆಹಲಿ ಮತ್ತು ಕೇರಳ ಶಿಕ್ಷಣ ವ್ಯವಸ್ಥೆಯ ಅಧ್ಯಯನ ನಡೆಸಲು ಶಿಕ್ಷಣ ತಜ್ಞರು ಮತ್ತು ಅಧಿಕಾರಿಗಳ ಜತೆ15 ದಿನಗಳಲ್ಲಿ ಆ ರಾಜ್ಯಗಳಿಗೆ ಭೇಟಿ ನೀಡುತ್ತೇನೆ ಎಂದು ಅವರು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

‘ಶಾಲಾ ಪಠ್ಯದಲ್ಲಿ ಪ್ರಾದೇಶಿಕತೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಅಗತ್ಯವೆನಿಸಿದರೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗುವುದು. ಈ ಕುರಿತು ಶಿಕ್ಷಣ ತಜ್ಞರ ಜತೆಗೆ ಮಾತುಕತೆ ನಡೆಸುತ್ತೇನೆ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯ ಪುಸ್ತಕಗಳನ್ನು ನೋಡುತ್ತೇನೆ. ಎಲ್ಲೆಲ್ಲಿ ಏನೆಲ್ಲಾ ಬದಲಾವಣೆ ಮಾಡಬಹುದು ಎಂಬ ಬಗ್ಗೆ ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತೇನೆ’ ಎಂದು ಅವರು ಹೇಳಿದರು.

ADVERTISEMENT

‘ಕರ್ನಾಟಕ ಪಬ್ಲಿಕ್‌ ಸ್ಕೂಲ್‌’ಗಳಿಗೆ ಉತ್ತಮ ಬೇಡಿಕೆ ಇದೆ. ಸರ್ಕಾರಿ ಶಾಲೆಗಳು ಮುಚ್ಚುವುದನ್ನು ತಡೆಯಲು ‘ಪಬ್ಲಿಕ್‌ ಸ್ಕೂಲ್‌’ ಅತ್ಯುತ್ತಮ ಪರ್ಯಾಯವಾಗಿದೆ. ಗ್ರಾಮಾಂತರ ಪ್ರದೇಶದ ಪೋಷಕರು ದುಬಾರಿ ಶುಲ್ಕ ತೆತ್ತು,ತಮ್ಮ ಮಕ್ಕಳನ್ನು ಖಾಸಗಿ ಮತ್ತು ಕಾನ್ವೆಂಟ್‌ ಶಾಲೆಗಳಿಗೆ ಸೇರಿಸುವುದನ್ನು ತಪ್ಪಿಸಬಹುದು ಎಂದು ಶ್ರೀನಿವಾಸ್‌ ತಿಳಿಸಿದರು.

ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ತಿ, ಶೌಚಾಲಯಗಳ ನಿರ್ಮಾಣ ಮತ್ತು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗಾಗಿ ₹1,200 ಕೋಟಿ ಅನುದಾನ ನೀಡಲಾಗಿದೆ.ಅರ್ಧದಲ್ಲೇ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆ ತರುವ ಸಂಬಂಧ ಅಭಿಯಾನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಕೊರತೆಯಿಂದ ಶಾಲೆ ಮುಚ್ಚುವುದನ್ನು ತಪ್ಪಿಸಬಹುದಾಗಿದೆ. ಪೋಷಕರು ಮಕ್ಕಳನ್ನು ಇಂಗ್ಲಿಷ್‌ ಶಾಲೆಗೆ ಸೇರಿಸಬೇಕು ಎಂಬ ಹಂಬಲದಿಂದಲೂ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆ ಆಗಿತ್ತು ಎಂದೂ ಅವರು ತಿಳಿಸಿದರು.

ಸಿಬಿಎಸ್‌ಇ ಮತ್ತು ಐಸಿಎಸ್‌ಇಯಲ್ಲಿ ಕನ್ನಡ ಕಡ್ಡಾಯ ಕಲಿಕೆಗೆ ಸಂಬಂಧಿಸಿದಂತೆ ಈ ಹಿಂದೆಯೇ ಒಂದು ಆದೇಶ ಹೊರಡಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಅದರ ಪಾಲನೆ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುದನ್ನು ಗಮನಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಾರ್ಪೊರೇಟ್‌ ಕಂಪನಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದೂ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.