ADVERTISEMENT

ಮಹಾನಗರ ಪಾಲಿಕೆ ಮತ್ತು 101 ನಗರಸಭೆಗಳಿಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 19:11 IST
Last Updated 19 ಡಿಸೆಂಬರ್ 2018, 19:11 IST

ಬೆಂಗಳೂರು: ‘ಮಹಾನಗರ ಪಾಲಿಕೆಗಳೂ ಸೇರಿದಂತೆ 101 ನಗರಸಭೆಗಳಿಗೆ 2019ರ ಮಾರ್ಚ್‌ನಲ್ಲಿ ಅಧಿಕಾರವಧಿ ‍ಪೂರ್ಣಗೊಳ್ಳುತ್ತಿದ್ದು ಅವುಗಳಿಗೆ ಸಂಬಂಧಿಸಿದ ಚುನಾವಣಾ ವೇಳಾಪಟ್ಟಿಯನ್ನು 2019ರ ಜನವರಿ 10ರವರೆಗೆ ಪ್ರಕಟಿಸುವುದಿಲ್ಲ’ ಎಂದು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ಗೆ ತಿಳಿಸಿದೆ.

ವಾರ್ಡ್‌ವಾರು ಮೀಸಲು ನಿಗದಿಗೊಳಿಸಿದ ಅಂತಿಮ ಅಧಿಸೂಚನೆ ಪ್ರಶ್ನಿಸಿ ಮಂಗಳೂರಿನ ರವೀಂದ್ರ ನಾಯಕ್ ಸಲ್ಲಿ
ಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ ಅವರು, ಈ ಕುರಿತಂತೆ ಹೈಕೋರ್ಟ್‌ಗೆ ವಿವರಿಸಿ, ‘ಮೀಸಲು ರೊಟೇಶನ್‌ ಪ್ರಶ್ನಿಸಿ ಈಗ ನಡೆಯುತ್ತಿರುವ ಪ್ರಕರಣಗಳ ಅಂತಿಮ ಆದೇಶ ಶೀಘ್ರವೇ ಹೊರಬೀಳುವುದೆಂಬ ನಿರೀಕ್ಷೆ ಇದೆ. ಹೀಗಾಗಿ ಜನವರಿ 10ವರೆಗೆ ವೇಳಾಪಟ್ಟಿ ಪ್ರಕಟಿಸುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ಇದೇ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎನ್‌.ದಿನೇಶ್‌ ರಾವ್‌, ‘ರಾಜ್ಯ ಸರ್ಕಾರ 2011ರ ಜನಗಣತಿ ಆಧರಿಸಿಯೇ ಕಾನೂನು ಪ್ರಕಾರ ಮೀಸಲು ನಿಗದಿಪಡಿಸಿದೆ. ಇದರಲ್ಲಿ ಯಾವುದೇ ಪುನಾರವರ್ತನೆ ಇಲ್ಲ. ಆದ್ದರಿಂದ ಈ ಕುರಿತ ಎಲ್ಲ ಅರ್ಜಿಗಳನ್ನೂ ವಜಾ ಮಾಡಬೇಕು’ಎಂದು ಕೋರಿದರು.

ವಿಚಾರಣೆಯನ್ನು ಗುರುವಾರಕ್ಕೆ (ಡಿ.20) ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.