ಸಂವಿಧಾನ ಪ್ರತಿ ಹಿಡಿದು ರಾಹುಲ್ ಗಾಂಧಿ ಮಾತು....
ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್
ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಮಹದೇವಪುರದಲ್ಲಿ ನಡೆದ ಮತ ಕಳ್ಳತನದ ಕುರಿತು ತನಿಖೆ ಮಾಡಬೇಕು. ಮತದಾರರ ಪಟ್ಟಿಯಲ್ಲಿ ನಕಲಿ ಹೆಸರು ಸೇರಿಸುವ ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ತಮ್ಮ ಪಕ್ಷವೇ ಅಧಿಕಾರದಲ್ಲಿರುವ ಕರ್ನಾಟಕ ಸರ್ಕಾರಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದರು.
‘ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ’ ಎಂದು ಆರೋಪಿಸಿ ದೇಶವ್ಯಾಪಿ ಪ್ರತಿಭಟನೆಗೆ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಚಾಲನೆ ನೀಡಿರುವ ಎಐಸಿಸಿ, ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಎಂಬ ಘೋಷಣೆಯನ್ನು ಮೊಳಗಿಸಿತು. ಚುನಾವಣಾ ವಂಚನೆಗಳ ವಿರುದ್ಧ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಘೋಷಣೆಯೊಂದಿಗೆ ‘ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ ಮುನ್ನುಡಿ ಬರೆಯಿತು.
‘ಸಂವಿಧಾನ’ದ ಪ್ರತಿಯನ್ನು ಕೈಯಲ್ಲಿ ಹಿಡಿದು ಈ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ರಾಹುಲ್, ‘ಮತ ಕಳ್ಳತನ ಮಾಡಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಮತದಾರರ ಪಟ್ಟಿ ಡಿಜಿಟಲ್ ರೂಪದಲ್ಲಿ ನಮಗೆ ಸಿಕ್ಕಿದರೆ ಕಳ್ಳ ಮತಗಳಿಂದ ಮೋದಿ ಈ ದೇಶದ ಪ್ರಧಾನಿ ಆಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತೇವೆ’ ಎಂದು ಗುಡುಗಿದರು.
‘ಇಲ್ಲಿ (ಕರ್ನಾಟಕದಲ್ಲಿ) ಒಂದು ಲೋಕಸಭಾ ಕ್ಷೇತ್ರವನ್ನು ಕಳವು ಮಾಡಲಾಗಿದೆ ಎಂದು ಪ್ರತಿಯೊಬ್ಬ ಅಧಿಕಾರಿ ಮತ್ತು ಚುನಾವಣಾ ಆಯುಕ್ತರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇದು ಕರ್ನಾಟಕದ ಜನರ ವಿರುದ್ಧದ ಅಪರಾಧ ಕೃತ್ಯ’ ಎಂದರು.
‘ಚುನಾವಣಾ ಆಯೋಗವು ಆಡಳಿತ ಪಕ್ಷದ ಪರ ಅಲ್ಲ, ಸಂವಿಧಾನಕ್ಕಾಗಿ ಕೆಲಸ ಮಾಡಬೇಕು. ಚುನಾವಣಾ ಆಯೋಗ ‘ಒಬ್ಬ ವ್ಯಕ್ತಿ, ಒಂದು ಮತ’ ಎಂಬ ಸಾಂವಿಧಾನಿಕ ಮೂಲಭೂತ ಕಲ್ಪನೆಯ ಮೇಲೆ ದಾಳಿ ಮಾಡುತ್ತಿದೆ. ಅದು ದೇಶದ ಬಡ ಜನರ ಮೇಲಿನ ದಾಳಿ. ಇದರಿಂದ ತಪ್ಪಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗದವರು ಭಾವಿಸುತ್ತಿದ್ದರೆ, ನಾವು ನಿಮ್ಮಲ್ಲಿ ಪ್ರತಿಯೊಬ್ಬರನ್ನು ಒಬ್ಬೊಬ್ಬರನ್ನಾಗಿ ಹಿಡಿಯುತ್ತೇವೆ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ನೀವು ಸಂವಿಧಾನದ ಮೇಲೆ ದಾಳಿ ಮಾಡಿದರೆ, ನಾವು ನಿಮ್ಮ ಮೇಲೆ ದಾಳಿ ಮಾಡುತ್ತೇವೆ’ ಎಂದು ಆಕ್ರೋಶದಿಂದ ಹೇಳಿದರು.
‘ಚುನಾವಣಾ ಆಯೋಗದ ಅಕ್ರಮಗಳನ್ನು ನಾವು ಬಹಿರಂಗಗೊಳಿಸಿದ ನಂತರ ಈ ದೇಶದ ಜನರು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಆದರೆ, ಈ ಆಯೋಗ ತನ್ನ ವೆಬ್‌ಸೈಟ್ ಅನ್ನೇ ಬಂದ್ ಮಾಡಿದೆ. ಬಿಹಾರದ ಮುಖ್ಯ ಚುನಾವಣಾಧಿಕಾರಿಯವರ ಕಚೇರಿಯ ವೆಬ್‌ಸೈಟ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಗಳ ವೆಬ್‌ಸೈಟ್‌ಗಳನ್ನು ಬಂದ್ ಮಾಡಲಾಗಿದೆ. ಚುನಾವಣಾ ಆಯೋಗದ ನಾಟಕ ಹೊರಗೆ ಬರುತ್ತದೆ, ಜನ ಪ್ರಶ್ನೆ ಮಾಡಲು ತೊಡಗುತ್ತಾರೆ ಎಂಬ ಭಯ ಆಯೋಗಕ್ಕೆ ಆವರಿಸಿದೆ’ ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಇದ್ದರು.
ಮತದಾರರ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ಹಾಗೂ ಚುನಾವಣೆಗೆ ಸಂಬಂಧಿಸಿದ ವಿಡಿಯೊ ದೃಶ್ಯಾವಳಿ ನೀಡಿದರೆ ಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಮತ ಕಳ್ಳತನ ಆಗಿರುವುದಕ್ಕೆ ಸಾಕ್ಷ್ಯಗಳನ್ನು ಒದಗಿಸುತ್ತೇವೆ
ಬಿಜೆಪಿಯು 35 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ 25 ಸ್ಥಾನಗಳನ್ನು ಗೆದ್ದಿದೆ. ಅಷ್ಟೇ ಅಂತರದ ಸಂಖ್ಯೆ ಆಧರಿಸಿ ಮೋದಿ ಪ್ರಧಾನಿ ಆಗಿದ್ದಾರೆ
ಚುನಾವಣಾ ಆಯೋಗವು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಒಂದು ದಿನ, ಅದು ವಿರೋಧ ಪಕ್ಷವನ್ನು ಎದುರಿಸಬೇಕಾಗುತ್ತದೆ
ಕಾಂಗ್ರೆಸ್ ಪಕ್ಷದವರಾದ ನಮ್ಮ ದೇಹದಲ್ಲಿ ಸಂವಿಧಾನದ ಡಿಎನ್‌ಎ ಇದೆ. ಸಂವಿಧಾನವು ಬಡ ಮತ್ತು ದೀನದಲಿತ ಜನರ ಅಸ್ತ್ರ
ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಬೆಲೆ ತೆತ್ತಾದರೂ ಸಂವಿಧಾನವನ್ನು ರಕ್ಷಿಸುತ್ತಾರೆ * 10 ವರ್ಷಗಳ ಮತದಾರರ ಪಟ್ಟಿಯನ್ನು ಡಿಜಿಟಲ್ ಸ್ವರೂಪದಲ್ಲಿ ಮತ್ತು ಮತದಾನದ ವಿಡಿಯೊ ದೃಶ್ಯಾವಳಿಗಳನ್ನು ಚುನಾವಣಾ ಆಯೋಗ ನೀಡದಿದ್ದರೆ, ಅದು ಮತ ಕಳ್ಳತನದ ಮೂಲಕ ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದರ್ಥ
ಚುನಾವಣಾ ಆಯೋಗ ಬಿಜೆಪಿ ಶಾಖಾ ಕಚೇರಿ. ಮತ ಕಳ್ಳತನ ಮಾಡಿ ಅಧಿಕಾರ ಹಿಡಿದಿರುವ ಮೋದಿ ಅವರಿಗೆ ಪ್ರಧಾನಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ನೈತಿಕ ಹಕ್ಕಿಲ್ಲ. ತಕ್ಷಣ ರಾಜೀನಾಮೆ ನೀಡಬೇಕುಸಿದ್ದರಾಮಯ್ಯ ಮುಖ್ಯಮಂತ್ರಿ
ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಇರುವಂತೆ ಪ್ರತಿ ಕ್ಷೇತ್ರದಲ್ಲಿ ಲೀಗಲ್ ಬ್ಯಾಂಕ್ ಸ್ಥಾಪಿಸುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಅವರ ಸೂಚನೆಗೆ ಬದ್ಧರಾಗಿದ್ದೇವೆಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
‘2024ರ ಚುನಾವಣೆಯನ್ನು ಮೋದಿ ಮತ್ತು ಕಂಪನಿ ಕಳ್ಳತನದಿಂದ ಗೆದ್ದಿದೆ. ಈ ಸರ್ಕಾರ ಬಹುಕಾಲ ಉಳಿಯುವುದಿಲ್ಲ. ಅವರ ಅಕ್ರಮವನ್ನು ಹೊರಗೆ ತಂದು ಜನರಿಂದ ಛೀಮಾರಿ ಹಾಕಿಸುತ್ತೇವೆ. ಕಳ್ಳತನದ ಸರ್ಕಾರಕ್ಕೆ ನೈತಿಕ ಬಲ ಇಲ್ಲ. ಅಧಿಕಾರದಲ್ಲಿ ಮುಂದುವರಿಯಲು ಹಕ್ಕಿಲ್ಲ. ಮೋದಿಯವರನ್ನು ಕೆಳಗಿಳಿಸುವುದಷ್ಟೇ ಅಲ್ಲ ಅವರಿಗೆ ಬುದ್ಧಿ ಕಲಿಸಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
‘ಎಲ್ಲ ಸಂಸದರು ಇದೇ 11ರಂದು ಕೇಂದ್ರ ಚುನಾವಣಾ ಆಯೋಗಕ್ಕೆ (ಸಿಇಸಿ) ತೆರಳಿ ದೂರು ನೀಡುತ್ತೇವೆ. ನಾವು ಒಂದಾಗಿದ್ದರೆ ಮಾತ್ರ ಮೋದಿಯವರ ಕಳ್ಳಾಟ ತಡೆಯಲು ಸಾಧ್ಯವೆಂಬ ಒಗ್ಗಟ್ಟಿನ ಸಂದೇಶವನ್ನು ‘ಇಂಡಿಯಾ’ ನಾಯಕರಿಗೆ ರವಾನಿಸಿದ್ದೇವೆ. ನಮ್ಮ ಮತ ಕಸಿದುಕೊಂಡ ನಂತರ ನಮ್ಮ ಅಸ್ತಿತ್ವವೇ ಇರುವುದಿಲ್ಲ. ಹೀಗಾಗಿ ‘ಕ್ವಿಟ್ ಇಂಡಿಯಾ’ ಚಳವಳಿ ಮಾದರಿಯಲ್ಲಿ ಸಂವಿಧಾನ ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ಮಾಡುತ್ತೇವೆ’ ಎಂದರು.
‘ಜೀವನದಲ್ಲಿ 12 ಚುನಾವಣೆ ಗೆದ್ದ ನಾನು 2019ರಲ್ಲಿ ಮೊದಲ ಬಾರಿಗೆ ಸೋತಿದ್ದೆ. ಆಗಲೂ ಇದೇ ರೀತಿ ಅಕ್ರಮ ಮಾಡಿದ್ದರು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ನಕಲಿ ಮತದಾನ ಮಾಡಿ ನಮ್ಮನ್ನು ಗುರಿ ಮಾಡಿದ್ದರು. ಆದರೆ ನಮಗೆ ಆಗ ಇದರ ಅರಿವಾಗಿರಲಿಲ್ಲ. ಈಗ ಎಲ್ಲವೂ ಬಯಲಿಗೆ ಬಂದಿದೆ. ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷ ಬಹಳ ಸೂಕ್ಷ್ಮವಾಗಿ ಎಲ್ಲ ಅಕ್ರಮಗಳನ್ನು ಹೊರಗೆ ತಂದಿದೆ’ ಎಂದರು.
‘ಮಹಾರಾಷ್ಟ್ರ ಉತ್ತರ ಪ್ರದೇಶ ರಾಜಸ್ಥಾನ ಬಿಹಾರ ಮಧ್ಯಪ್ರದೇಶ ಸೇರಿ ಎಲ್ಲೆಡೆ ಮತದಾನದ ಹಕ್ಕನ್ನು ದುರ್ಬಳಕೆ ಮಾಡಿಕೊಂಡು ನಕಲಿ ಮತದಾನದ ಮೂಲಕ ಮೋದಿ ಈ ದೇಶವನ್ನು ಆಳುತ್ತಿದ್ದಾರೆ. ಜನ ಮತ ನೀಡದಿದ್ದರೂ ಮೋದಿ ಮತ್ತು ಅಮಿತ್ ಶಾ ಅವರು ಮತ ಕಳ್ಳತನದ ಮೂಲಕ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.