ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ಪೂರಕವಾಗಿ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಕುರಿತು ಸಮಾಜದ ಎಲ್ಲ ಹಂತಗಳಲ್ಲಿ ಚರ್ಚೆ ಅಗತ್ಯ ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಚುನಾವಣಾ ವ್ಯವಸ್ಥೆಯಲ್ಲಿನ ಲೋಪದೋಷಗಳು ಪ್ರಜಾಪ್ರಭುತ್ವದ ಅಧಃಪತನಕ್ಕೆ ಎಡೆಮಾಡುವ ಅಪಾಯವಿದೆ. ಈಗಲೇ ಎಚ್ಚೆತ್ತುಕೊಂಡು ಚುನಾವಣಾ ವ್ಯವಸ್ಥೆಯನ್ನು ಸರಿದಾರಿಗೆ ತರುವ ಬಗ್ಗೆ ಚರ್ಚಿಸಿ, ಹೆಜ್ಜೆ ಇಡಬೇಕಾಗಿದೆ' ಎಂದರು.
ಚುನಾವಣೆಯಲ್ಲಿನ ದೋಷಗಳಿಂದ ಅನೇಕ ಸಮಸ್ಯೆಗಳು ಜಟಿಲವಾಗುತ್ತಿವೆ. ಈ ಕುರಿತು ಸಮಾಜದ ಗಣ್ಯರು ಮೌನಕ್ಕೆ ಶರಣಾಗಿದ್ದಾರೆ. ಕೇವಲ ರಾಜಕಾರಣಿಗಳನ್ನು ದೂರುವುದರಿಂದ ಸಮಸ್ಯೆಗೆ ಪರಿಹಾರ ದೊರೆಯದು. ಇಡೀ ಸಮಾಜವೇ ಒಟ್ಟಾಗಿ ಚಿಂತಿಸಿ, ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
'ಚರ್ಚೆ ಸಮಾಜದ ಯಾವುದೇ ಮೂಲೆಯಲ್ಲಿ ಆರಂಭವಾದರೂ ಸ್ವಾಗತ. ವಿಧಾನಮಂಡಲದಲ್ಲೂ ಚರ್ಚೆ ಆರಂಭಿಸುವಂತೆ ಎಲ್ಲ ಶಾಸಕರಿಗೂ ಸಲಹೆ ನೀಡುವೆ. ಈ ಕುರಿತ ಚರ್ಚೆಗೆ ವೇದಿಕೆ ಕಲ್ಪಿಸಲು ನಾನು ಮುಕ್ತವಾಗಿದ್ದೇನೆ' ಎಂದು ಸ್ಪೀಕರ್ ಹೇಳಿದರು.
ಚುನಾವಣಾ ಆಯೋಗ ಕೂಡ ಯಾಂತ್ರಿಕವಾಗಿ ಚುನಾವಣೆ ನಡೆಸುವುದಕ್ಕೆ ಸೀಮಿತ ಆಗಬಾರದು. ಚುನಾವಣೆಗಳಲ್ಲಿ ಸುಧಾರಣೆ ತರುವ ಕುರಿತು ಆಯೋಗ ಕೂಡ ಪ್ರಕ್ರಿಯೆ ಆರಂಭಿಸಬೇಕು ಎಂದರು.
ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.