ADVERTISEMENT

ನರೇಂದ್ರ ಮೋದಿ ದೇಶ ಕಂಡ‌ ವಚನ ಭ್ರಷ್ಟ ರಾಜಕಾರಣಿ: ಸಿದ್ದರಾಮಯ್ಯ

ಮೋದಿ ಕಾರ್ಯವೈಖರಿಗೆ ಉಪಚುನಾಚಣೆ ಕನ್ನಡಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 10:58 IST
Last Updated 31 ಅಕ್ಟೋಬರ್ 2018, 10:58 IST
   

ಬಳ್ಳಾರಿ: ನರೇಂದ್ರ ಮೋದಿ ದೇಶ ಕಂಡ‌ ವಚನ ಭ್ರಷ್ಟ ರಾಜಕಾರಣಿ. ರಾಜ್ಯದ ಉಪಚುನಾವಣೆಗಳು ಅವರ ಕಾರ್ಯವೈಖರಿಯ ವಿರುದ್ಧಜನಾಭಿಪ್ರಾಯವನ್ನು ದಾಖಲಿಸುವುದು ಖಚಿತ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ‌ ಅಭಿಪ್ರಾಯಪಟ್ಟರು.

‘ಅಚ್ಛೇದಿನ್ ಬರಲಿಲ್ಲ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಇಳಿಯಲಿಲ್ಲ. ಉದ್ಯಮಿಗಳು ಕೋಟ್ಯಂತರ ರೂಪಾಯಿ ವಂಚಿಸಿ ಮೋದಿ ಮುಂದೆಯೇ ದೇಶ ಬಿಟ್ಟರು’ ಎಂದು ನಗರದಲ್ಲಿ‌ ಬುಧವಾರ ಸುದ್ದಿಗೋಷ್ಟಿಯಲ್ಲಿಹೇಳಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಐದು ವರ್ಷಕ್ಕೊಮ್ಮೆ ಆಯ್ಕೆ ಮಾಡುತ್ತಾರೆ. ರಾಜ್ಯದಲ್ಲಿ ಸಚಿವರಾಗಬೇಕು ಎಂಬ ದುರಾಸೆಯಿಂದ ಶ್ರೀರಾಮುಲು ಸಂಸತ್ ಸದಸ್ಯ ಸದಸ್ಯ ಸ್ಥಾನಕ್ಕೆ‌ ರಾಜೀನಾಮೆ ಕೊಟ್ಟರು. ಜನ ಇದನ್ನು‌ ಸಹಿಸಲ್ಲ, ಇಷ್ಟಪಡಲ್ಲ‌’ ಎಂದರು.

ADVERTISEMENT

‘ಕ್ಷೇತ್ರದ ಎಲ್ಲೆಡೆ ರಾಮುಲು ಬಗ್ಗೆ ಅಸಮಾಧಾನವಿದೆ. ಮತದಾರರನ್ನು ಅವರು ಬೇಕಾಬಿಟ್ಟಿ ಭಾವಿಸಿದ್ದಾರೆ. ವಿಧಾನಸಭೆಗೆ ‌ಮತ್ತು ‌ಲೋಕಸಭೆಗೆ ರಾಜೀನಾಮೆ ನೀಡಿ ಜನರೊಂದಿಗೆ ಆಟ ಆಡಬಾರದು.‌ ಕ್ಷೇತ್ರಕ್ಕೆ ಅವರ‌ ಕೊಡುಗೆ ಏನೇನೂ ಇಲ್ಲ’ ಎಂದರು.

‘ಜನ ಉಗ್ರಪ್ಪನವರಿಗೆ ಆಶೀರ್ವಾದ ಮಾಡುತ್ತಾರೆ. ಜನಕ್ಕೆ ರಿಪಬ್ಲಿಕ್ ಆಫ್ ಬಳ್ಳಾರಿ ಬೇಕಾಗಿಲ್ಲ. ಲೋಕಸಭೆಯಲ್ಲಿ ಬಳ್ಳಾರಿಗೊಂದು ಗಟ್ಟಿ ದನಿ ಬೇಕಾಗಿದೆ’ ಎಂದು ಪ್ರತಿಪಾದಿಸಿದರು.

‘ಅಕ್ರಮ ಗಣಿಗಾರಿಕೆ ಕುರಿತು ಸತ್ಯಶೋಧನೆ ಸಮಿತಿಯ ಅಧ್ಯಕ್ಷರಾಗಿ ಉಗ್ರಪ್ಪ‌ ವರದಿ ಸಲ್ಲಿಸಿದ ‌ಬಳಿಕ ಲೋಕಾಯುಕ್ತದ ಕಾರ್ಯ ಆರಂಭವಾಯಿತು’ ಎಂದರು.

‘ರಾಮುಲು ಆಗ ಹಲವರ‌ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ,ಅವರಿಗೆ 371ಜೆ ಗೊತ್ತಿಲ್ಲ, ಐಪಿಸಿ ಸೆಕ್ಷನ್ ಗೊತ್ತಿರಬಹುದು ಎಂದಿದ್ದೆ. ಅದಕ್ಕೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲ’ ಎಂದರು.

‘420 ಎಂದು ತಮ್ಮನ್ನು ತಾವೇ ಶ್ರೀರಾಮುಲು ಕರೆದುಕೊಂಡಿದ್ದಾರೆ. ನಾನು ಕರೆದಿದ್ದಲ್ಲ’ ಎಂದು ವ್ಯಂಗ್ಯವಾಡಿದರು.

‘371ಜೆ ಅಡಿಯಲ್ಲಿ ಕೇಂದ್ರದಿಂದ ಒಂದು ‌ರೂಪಾಯಿ ಅನುದಾನ ತಂದಿಲ್ಲ. ಬಿಜೆಪಿ ಅಭ್ಯರ್ಥಿ ಬಳ್ಳಾರಿಯಲ್ಲಿ ಹುಟ್ಟಿದ್ದರಿಂದ ಇಲ್ಲಿನ ಜನರಿಗೆ ಆದ ಲಾಭವೇನು? ಉಗ್ರಪ್ಪ ರಾಜಕಾರಣಕ್ಕೆ ಬಂದಾಗ ಶ್ರೀರಾಮುಲು ಎಲ್ಲಿದ್ದರು ಎಂದು ಹೇಳಲಿ’ ಎಂದು ಸವಾಲು ಹಾಕಿದರು.

‘ಸಿದ್ದರಾಮಯ್ಯ ಸರಿಯಾಗಿ ಪಕ್ಷ, ಲಕ್ಷ ಎಂದು ಉಚ್ಛರಿಸಲಿ ಎಂದು ರಾಮುಲು ‌ಸವಾಲು ಹಾಕಿದ್ದಾರೆ. ಅವರು ಕ್ಷ ಎಂಬುದು ಸ್ವತಂತ್ರ ಅಕ್ಷರವೋ, ಸಂಯುಕ್ತ ಅಕ್ಷರವೋ ಎಂದು ಹೇಳಲಿ. ನನಗೇ ಕನ್ನಡ ಹೇಳಿಕೊಟ್ಟರೆ ಹೆಂಗಪ್ಪಾ’ಎಂದ ಅವರು, ಲಕ್ಷ ಪಕ್ಷ ಎಂದು‌ ಹಲವು ಬಾರಿ ಹೇಳಿ, ಉಚ್ಛಾರಣೆ ಸರಿಯಾಗಿದೆಯೇ ಎಂದು ಸುದ್ದಿಗಾರರನ್ನು ಕೇಳಿದರು.

‘ರಾಮುಲು ಅಕ್ಷರ ಕಲಿಯಲಿ ಎಂದು ಇದನ್ನು ಹೇಳುತ್ತಿಲ್ಲ. ಶಾಸಕರಾಗಲು ಅದು ಒಂದೇ ಅರ್ಹತೆ ಅಲ್ಲ. ಜನಪ್ರತಿನಿಧಿಗಳಿಗೆ ಕ್ಷೇತ್ರವನ್ನು‌ ಪ್ರತಿನಿಧಿಸುವ ಶಕ್ತಿ ಇರಬೇಕು. ಜನರ ದನಿಯಾಗಬೇಕು ಎಂಬ ಅರ್ಥದಲ್ಲಿ ಅವರಿಗೆ ಮಾತನಾಡಲು ಬರುವುದಿಲ್ಲ ಎಂದಿದ್ದೆ’ ಎಂದರು.

‘ಜನಾರ್ದನ ರೆಡ್ಡಿ ‌ಅಕ್ರಮ ಗಣಿಗಾರಿಕೆ ಮಾಡದೆ ಇದ್ದರೆ ಜೈಲಿಗೆ ಏಕೆ‌ ಹೋದರು? ರೆಡ್ಡಿ ಬಂಗಾರದ ಜೀವನವನ್ನು ಹೇಗೆ ಗಳಿಸಿದರು‌ ಎಂಬುದು ಇಡೀ ದೇಶಕ್ಕೆ ಗೊತ್ತು. ಸಾಕ್ಷಿ ‌ಪುರಾವೆಯಿಲ್ಲದೆ ಯಾವ ನ್ಯಾಯಾಧೀಶರೂ ಅಮಾಯಕರನ್ನು ಜೈಲಿಗೆ ಕಳಿಸಲ್ಲ’ ಎಂದರು.

‘ರೆಡ್ಡಿ‌ಯವರನ್ನು ಪಕ್ಷವೇ ದೂರವಿಟ್ಟಿದೆ. ಆದರೆ, ಅವರೇ ಅದರ ಮೈಮೇಲೇ ಬೀಳುತ್ತಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ‌ ಆರು ಕಾಂಗ್ರೆಸ್ ಶಾಸಕರಿದ್ದು ಒಬ್ಬರಿಗೆ ಸಚಿವ ಸ್ಥಾನ ನೀಡಲಾಗುವುದು’ ಎಂದು‌ ತಿಳಿಸಿದರು.

‘ಪತ್ರಕರ್ತರಾಗಿದ್ದಾಗ ಅಕ್ರಮ ಗಣಿಗಾರಿಕೆ ವಿರುದ್ದ ಪುಸ್ತಕ ಬರೆದ ಸಂಸದ ಪ್ರತಾಪ ಸಿಂಹ, ನಾನು‌ ಮೊದಲ ‌ಚುನಾವಣೆಯಲ್ಲಿ‌ ಸ್ಪರ್ಧಿಸಿದಾಗ ಎಲ್ಲಿದ್ದರು ಎಂದು ಹೇಳಲಿ’ಎಂದು ಸವಾಲು ಹಾಕಿದರು.

‘ಯಡಿಯೂರಪ್ಪನವರಿಗೆ ‌ಮಲಗಿದ‌ ಕೂಡಲೇ ಮುಖ್ಯಮಂತ್ರಿ‌ ಕೊಠಡಿ ಕಾಣಿಸುತ್ತದೆ. ಅವರು ಹೇಳಿದ‌ ಮಾತ್ರಕ್ಕೆ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.