ADVERTISEMENT

ಸಂವಿಧಾನವೊ, ಮನುಸ್ಮೃತಿಯೊ ನಿರ್ಧರಿಸಿ: ಖರ್ಗೆ

ಕುಂದಗೋಳ ಉಪ ಚುನಾವಣೆ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 15 ಮೇ 2019, 19:47 IST
Last Updated 15 ಮೇ 2019, 19:47 IST
ಕುಂದಗೋಳದ ಕಮಡೊಳ್ಳಿಯಲ್ಲಿ ನಡೆದ ಪ್ರಚಾರಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಕಾರ್ಯಕರ್ತರತ್ತ ಕೈ ಬೀಸಿದರು. ಶಾಸಕ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕಾಂಗ್ರೆಸ್ ನಾಯಕಿ ಉಮಾಶ್ರೀ, ಶಾಸಕರಾದ ಮುನಿರತ್ನ, ಪ್ರಸಾದ ಅಬ್ಬಯ್ಯ ಹಾಗೂ ಮಹಾಂತೇಶ ಕೌಜಲಗಿ ಇದ್ದಾರೆ –ಪ್ರಜಾವಾಣಿ ಚಿತ್ರ
ಕುಂದಗೋಳದ ಕಮಡೊಳ್ಳಿಯಲ್ಲಿ ನಡೆದ ಪ್ರಚಾರಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಕಾರ್ಯಕರ್ತರತ್ತ ಕೈ ಬೀಸಿದರು. ಶಾಸಕ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕಾಂಗ್ರೆಸ್ ನಾಯಕಿ ಉಮಾಶ್ರೀ, ಶಾಸಕರಾದ ಮುನಿರತ್ನ, ಪ್ರಸಾದ ಅಬ್ಬಯ್ಯ ಹಾಗೂ ಮಹಾಂತೇಶ ಕೌಜಲಗಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಕುಂದಗೋಳ (ಹುಬ್ಬಳ್ಳಿ): ‘ದೇಶದಕ್ಕೆ ಸಂವಿಧಾನ ಬೇಕೋ ಅಥವಾ ಮನುಸ್ಮೃತಿಯೊ ಎಂಬುದನ್ನು ಈ ಚುನಾವಣೆ ನಿರ್ಧರಿಸಲಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕುಂದಗೋಳ ತಾಲ್ಲೂಕಿನ ಕಮಡೊಳ್ಳಿಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಈ ಚುನಾವಣೆಯಲ್ಲಿ ಜಾತಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಂವಿಧಾನ ಬೇಕೊ ಅಥವಾ ಮನುಸ್ಮೃತಿ ಬೇಕೋ ಎಂದು ಮತದಾರರು ನಿರ್ಣಯಿಸಬೇಕಾಗಿದೆ’ ಎಂದರು.

‘ಬಿಜೆಪಿಯವರು ಲೋಕಸಭಾ ಚುನಾವಣೆಯಲ್ಲಷ್ಟೇ ಅಲ್ಲ, ಪಂಚಾಯ್ತಿ ಮಟ್ಟದ ಚುನಾವಣೆಯಲ್ಲೂ ಮೋದಿ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಅಂದರೆ, ಹೆಣ್ಣು ನೋಡಲು ಬಂದ ಹುಡುಗನನ್ನು ಚನ್ನಾಗಿಲ್ಲ ಎಂದು ಹುಡುಗಿ ತಿರಸ್ಕರಿಸುತ್ತಾಳೆ. ಆಗ, ಆತನ ಕಡೆಯುವರು ಹುಡುಗನನ್ನು ನೋಡಬೇಡಿ. ಅವರ ಅಪ್ಪನನ್ನು ನೋಡಿ ಅಂದರಂತೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಬಿಜೆಪಿ ದೇಶೋದ್ಧಾರಕವಲ್ಲ. ಬದಲಿಗೆ, ಸಮಾಜ ಒಡೆಯುವ ಪಕ್ಷ. ಪ್ರಜಾಪ್ರಭುತ್ವ, ಸಂವಿಧಾನ, ಸಿಬಿಐ, ಐ.ಟಿ, ಇ.ಡಿ ಸೇರಿದಂತೆ ದೇಶದ ಅತ್ಯುನ್ನತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಜನ ಅವುಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಬಿಜೆಪಿಯವರು ಆರೆಸ್ಸೆಸ್‌ ಮಾತು ಕೇಳಿದಂತೆ, ಜನರ ಮಾತನ್ನು ಕೇಳುವುದಿಲ್ಲ’ ಎಂದು ಟೀಕಿಸಿದರು.

‘ಸಂಸತ್ತಿನಲ್ಲಿ ಪ್ರಧಾನಿ ಮೋದಿ 5 ವರ್ಷದಲ್ಲಿ ಮಾತನಾಡಿದ್ದು ಕೇವಲ 25 ಗಂಟೆ. ತನ್ನನ್ನು ಬೆಳೆಸಿದ ಗುರು ಎಲ್‌.ಕೆ. ಅಡ್ವಾಣಿಗೆ ಏಟು ಕೊಟ್ಟವರಿಗೆ ಓಟು ಹಾಕಬೇಕಾ?’ ಎಂದು ಪ್ರಶ್ನಿಸಿದರು.

ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ‘ಜನರ ದುಡ್ಡನ್ನು ಅವರು ಕಷ್ಟದಲ್ಲಿದ್ದಾಗ ಅವರಿಗಾಗಿ ಖರ್ಚು ಮಾಡುವುದೇ ನಿಜವಾದ ಸರ್ಕಾರ. ನಾನು ಅದನ್ನು ಮಾಡಿ ತೋರಿಸಿದೆ. ಆದರೆ, ಮೋದಿ ಬಡವರಿಗಾಗಿ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ದಲಿತ ಸಿ.ಎಂ ಚರ್ಚೆ ಅಪ್ರಸ್ತುತ’

‘ಮಲ್ಲಿಕಾರ್ಜುನ ಖರ್ಗೆ ಅವರು ಎಂದೋ ಸಿ.ಎಂ ಆಗಬೇಕಾಗಿತ್ತು’ ಎಂಬ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ದಲಿತ ಎನ್ನುವ ಕಾರಣಕ್ಕಾಗಿ ಆ ಹುದ್ದೆಗೆ ಪರಿಗಣಿಸಬಾರದು. ಬದಲಿಗೆ ಅರ್ಹತೆ ನೋಡಿ. ಸದ್ಯ ಸಿ.ಎಂ ಕುರ್ಚಿ ಖಾಲಿ ಇಲ್ಲ. ಆ ಕುರಿತ ಚರ್ಚೆ ಅಪ್ರಸ್ತುತ’ ಎಂದರು.

‘ದಲಿತರು ಮುಖ್ಯಮಂತ್ರಿಯಾಗಬೇಕು ಎಂಬುದು ಭಾವಾನಾತ್ಮಕ ವಿಷಯವಾಗಿರುವುದರಿಂದ, ಬಿಜೆಪಿಯವರು ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಾರೆ’ ಎಂದು ಬಿ.ಎಸ್. ಯಡಿಯೂರಪ್ಪ ಅವರ, ‘ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲಿ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ‘ಜನರ ದುಡ್ಡನ್ನು ಅವರು ಕಷ್ಟದಲ್ಲಿದ್ದಾಗ ಅವರಿಗಾಗಿ ಖರ್ಚು ಮಾಡುವುದೇ ನಿಜವಾದ ಸರ್ಕಾರ. ನಾನು ಅದನ್ನು ಮಾಡಿ ತೋರಿಸಿದೆ. ಆದರೆ, ಮೋದಿ ಬಡವರಿಗಾಗಿ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಜಗದೀಶ ಶೆಟ್ಟರ್‌ ಟೈಮ್‌ ಬಾಂಬ್‌ ಎಕ್ಸ್‌ಪರ್ಟ್‌’

ಬಿಎಸ್‌ವೈ ಅವರಿಂದಾಗಿ ಪಕ್ಷದೊಳಗೆ ಮೂಲೆಗುಂಪಾಗಿರುವ‌ ಟೈಮ್‌ ಬಾಂಬ್‌ ಎಕ್ಸ್‌ಪರ್ಟ್‌ ಜಗದೀಶ ಶೆಟ್ಟರ್‌ ರಾಜಕೀಯ ಅಸ್ತಿತ್ವ ತೋರಿಸಿಕೊಳ್ಳಲು ಆಗಾಗ‌ ಇಂಥ ಜೋಕುಗಳನ್ನು ಮಾಡುತ್ತಿರುತ್ತಾರೆ. ಅವರನ್ನು ಪಕ್ಷದ ಒಳಗೆ ಹಾಗೂ ಹೊರಗೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ‌ ಎನ್ನುವುದೇ ಅವರ ಕೊರಗು ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಶೆಟ್ಟರ್‌ಗೆ ತಿರುಗೇಟು ನೀಡಿದ್ದಾರೆ.

ಶೆಟ್ಟರ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ‘ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದ್ದರಿಂದ ಅವರು ಟೈಂ ಬಾಂಬ್‌’ ಎಂದಿದ್ದರು.

ಖರ್ಗೆ ಸಿಎಂ ಆಗಲು ತಕರಾರಿಲ್ಲ: ಪರಮೇಶ್ವರ್‌

ಕಲಬುರ್ಗಿ: ‘ಮಲ್ಲಿಕಾರ್ಜುನ ಖರ್ಗೆ ದಲಿತ ಸಮುದಾಯದ ದೊಡ್ಡ ನಾಯಕ. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಅಪಾರ. ಹೀಗಾಗಿ ಅವರು ಮುಖ್ಯಮಂತ್ರಿ ಆಗಲು ನನ್ನ ತಕರಾರೇನೂ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹೇಳಿದರು.

ಚಿಂಚೋಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಜಗಳ ಹಚ್ಚುವ ಕೆಲಸವನ್ನು ಮಾಡುತ್ತಾರೆ. ಅದಕ್ಕಾಗಿ ಇಂತಹ ಸಂದರ್ಭಗಳನ್ನು ಸೃಷ್ಟಿಸುತ್ತಾರೆ. ಅವರ ವಿಷಯ ಏನೇ ಇರಲಿ, ಮುಖ್ಯಮಂತ್ರಿಯಾಗಲು ಖರ್ಗೆ ಅವರು ಎಲ್ಲ ರೀತಿಯಿಂದಲೂ ಅರ್ಹರಿದ್ದಾರೆ’ ಎಂದರು.

‘ಕುಮಾರಸ್ವಾಮಿ ಅವರಿಂದ ರಾಜೀನಾಮೆ ಕೊಡಿಸಿ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುತ್ತೀರಾ’ ಎಂಬ ಪ್ರಶ್ನೆಗೆ, ‘ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಎಂದು ವರಿಷ್ಠರು ತೀರ್ಮಾನಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಇರುವುದರಿಂದ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.