ADVERTISEMENT

‘ಎಲೆಕ್ಟ್ರಾನಿಕ್‌ ಟೋಲ್‌ನಿಂದ ಆದಾಯ ಸೋರಿಕೆಗೆ ಕಡಿವಾಣ’

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 20:02 IST
Last Updated 15 ಅಕ್ಟೋಬರ್ 2019, 20:02 IST

ಬೆಂಗಳೂರು: ಎಲೆಕ್ಟ್ರಾನಿಕ್‌ ಟೋಲ್‌ ವ್ಯವಸ್ಥೆ ಜಾರಿಗೆ ಬರುವುದರಿಂದ ಆದಾಯ ಸೋರಿಕೆಗೆ ಕಡಿವಾಣ ಬೀಳಲಿದೆ ಮತ್ತು ಪ್ರತಿ ವಾಹನದ ಮೇಲೂ ಕ್ಯಾಮೆರಾ ಕಣ್ಣುಗಳು ನಿಗಾ ಇಡುವುದರಿಂದ ಸಮಾಜಘಾತುಕ ಶಕ್ತಿಗಳನ್ನು ಕ್ಷಣ ಮಾತ್ರದಲ್ಲಿ ಪತ್ತೆ ಮಾಡಲು ಸಾಧ್ಯವಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಏಕರೂಪದ ತೆರಿಗೆ ಟೋಲ್ ಶುಲ್ಕ ಕುರಿತ ಒನ್ ನೇಷನ್- ಒನ್ ಫಾಸ್ಟ್‌ಟ್ಯಾಗ್ ಕುರಿತು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಮ್ಯಾನುವಲ್‌ ಟೋಲ್‌ನಿಂದ ಈಗ ಆದಾಯ ಸೋರಿಕೆ ಆಗುತ್ತಿದೆ. ಬಹಳ ಹೊತ್ತು ಸಾಲಿನಲ್ಲಿ ನಿಲ್ಲುವ ವಾಹನಗಳು ಎಂಜಿನ್‌ ಆನ್‌ನಲ್ಲೇ ಇಟ್ಟುಕೊಳ್ಳುವುದರಿಂದ ಇಂಧನವೂ ವ್ಯರ್ಥ ಮತ್ತು ಪ್ರಯಾಣಿಕರ ಸಮಯವೂ ವ್ಯರ್ಥವಾಗುತ್ತಿದೆ. ಫಾಸ್ಟ್‌ ಟ್ಯಾಗ್‌ ಎಲೆಕ್ಟ್ರಾನಿಕ್‌ ಟೋಲ್‌ನಿಂದ ಈ ಸಮಸ್ಯೆಗೆ ಕಡಿವಾಣ ಬೀಳಲಿದೆ ಎಂದು ಅವರು ಹೇಳಿದರು.

ADVERTISEMENT

ಮೊಬೈಲ್‌ ಸಿಮ್‌ ಚಾರ್ಜಿಂಗ್‌ ಮಾದರಿಯಲ್ಲಿಫಾಸ್ಟ್‌ ಟ್ಯಾಗ್‌ ಎಲೆಕ್ಟ್ರಾನಿಕ್‌ ಟೋಲ್‌ ವ್ಯವಸ್ಥೆ ಹೊಂದಿರುತ್ತದೆ. ವಾಹನ ಚಾಲಕರು ಸಿಮ್‌ ಕಾರ್ಡ್‌ ಹೊಂದಿರಬೇಕು. ಹಾಗಿದ್ದಾಗ ಟೋಲ್‌ನಲ್ಲಿ ಕಾಯುವ ಅಗತ್ಯವಿರುವುದಿಲ್ಲ. ದೇಶದ ಎಲ್ಲೆಡೆ ಒಂದೇ ರೀತಿ ಟೋಲ್‌ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಮನಬಂದಂತೆ ಟೋಲ್‌ ನಿಗದಿ ಮಾಡಲು ಸಾಧ್ಯವಿಲ್ಲ ಎಂದರು.

ಕಾಯಂ ದುರಸ್ತಿಗೆ ₹ 8 ಸಾವಿರ ಕೋಟಿ
ನೆರೆಯಿಂದ ಹಾನಿಗೀಡಾಗಿರುವ ವಿವಿಧ ರೀತಿಯ ರಸ್ತೆಗಳು ಮತ್ತು ಸೇತುವೆಗಳ ಕಾಯಂ ದುರಸ್ತಿಗೆ ₹,8000 ಕೋಟಿಗಳ ಅಗತ್ಯವಿದ್ದು, ಅಷ್ಟು ಹಣ ಹೊಂದಿಸುವುದೇ ಕಷ್ಟವಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು

ರಾಜ್ಯದಲ್ಲಿ ನೆರೆಯಿಂದಾಗಿ 4,200 ಕಿ.ಮೀ ರಸ್ತೆಗಳಿಗೆ ಗಂಭೀರ ಸ್ವರೂಪದ ಹಾನಿಯಾಗಿದೆ. ರಾಜ್ಯ ಹೆದ್ದಾರಿಗಳು ಮತ್ತು ಅದಕ್ಕಿಂತ ಕೆಳ ಹಂತದ ರಸ್ತೆಗಳು ಹಾನಿಗೀಡಾಗಿವೆ ಎಂದು ತಿಳಿಸಿದರು.

ಶಿರಾಡಿ ಘಾಟ್‌ ರಸ್ತೆ ದುರಸ್ತಿಗೆ ಪ್ರಸ್ತಾವನೆ
ಶಿರಾಡಿ ಘಾಟ್‌ ರಸ್ತೆ ಅರ್ಧದಷ್ಟು ಹಾಳಾಗಿರುವುದರಿಂದ ಅದರ ದುರಸ್ತಿಗೆ ₹ 4,000 ಕೋಟಿ ಪ್ರಸ್ತಾವನೆಯೊಂದನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕಾರಜೋಳ ತಿಳಿಸಿದರು.

ಒಂದು ತಿಂಗಳು ಬಿಟ್ಟು ಬರುವಂತೆ ಅವರು ಸೂಚನೆ ನೀಡಿದ್ದಾರೆ. ಘಾಟಿಯಲ್ಲಿ ಇತ್ತೀಚೆಗೆ ಪ್ರಯಾಣ ಮಾಡಿ ನೋಡಿದ್ದೇನೆ. ಸಾಕಷ್ಟು ಕಡೆಗಳಲ್ಲಿ ರಸ್ತೆ ಹಾಳಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.