ADVERTISEMENT

ಕೆರೆಯಲ್ಲಿ ನರಳಿ ಜೀವ ಬಿಟ್ಟ ಹೆಣ್ಣಾನೆ

ಮುಂಡಗೋಡ: ಫಲ ನೀಡದ ರಕ್ಷಣಾ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 13:20 IST
Last Updated 30 ಏಪ್ರಿಲ್ 2020, 13:20 IST
ಮುಂಡಗೋಡ ತಾಲ್ಲೂಕಿನ ಗುಂಜಾವತಿ ಅರಣ್ಯ ಪ್ರದೇಶ ವ್ಯಾಪ್ತಿಯ ಅರಳಿಕಟ್ಟೆ ಕೆರೆಯಲ್ಲಿ ಅಸ್ವಸ್ಥಗೊಂಡು ಮಲಗಿದ್ದ ಹೆಣ್ಣಾನೆಯನ್ನು ಗುರುವಾರ ಕ್ರೇನ್ ಮೂಲಕ ದಡಕ್ಕೆ ತರಲಾಯಿತು
ಮುಂಡಗೋಡ ತಾಲ್ಲೂಕಿನ ಗುಂಜಾವತಿ ಅರಣ್ಯ ಪ್ರದೇಶ ವ್ಯಾಪ್ತಿಯ ಅರಳಿಕಟ್ಟೆ ಕೆರೆಯಲ್ಲಿ ಅಸ್ವಸ್ಥಗೊಂಡು ಮಲಗಿದ್ದ ಹೆಣ್ಣಾನೆಯನ್ನು ಗುರುವಾರ ಕ್ರೇನ್ ಮೂಲಕ ದಡಕ್ಕೆ ತರಲಾಯಿತು   

ಮುಂಡಗೋಡ: ಕೆಲವು ದಿನಗಳಿಂದ ಗಾಯಗೊಂಡು ಸಂಚರಿಸುತ್ತಿದ್ದ ಹೆಣ್ಣಾನೆಯೊಂದು ತಾಲ್ಲೂಕಿನ ಗುಂಜಾವತಿ ಅರಣ್ಯ ಪ್ರದೇಶ ವ್ಯಾಪ್ತಿಯ ಅರಳಿಕಟ್ಟೆ ಕೆರೆಯಲ್ಲಿಗುರುವಾರ ಸಂಜೆ ಮೃತಪಟ್ಟಿದೆ.

ಅಂದಾಜು 20 ವರ್ಷದ ಆನೆ ಇದಾಗಿದ್ದು, ಎರಡು ದಿನಗಳಿಂದನಿತ್ರಾಣಗೊಂಡ ಸ್ಥಿತಿಯಲ್ಲಿ ಕಂಡುಬಂದಿತ್ತು. ಅದರ ಕಿವಿಯ ಭಾಗದಲ್ಲಿ ಹುಳಗಳಾಗಿದ್ದವು. ಆ ವೇದನೆಯಿಂದ ತಪ್ಪಿಸಿಕೊಳ್ಳಲು ಕೆರೆಯ ನೀರಿನಲ್ಲಿ ಮಲಗಿತ್ತು. ಆದರೆ,ಮೇಲೇಳಲು ಆಗದೇ ಅಲ್ಲಿಯೇ ತಿರುಗುತ್ತ ಸೊಂಡಿಲಿನಿಂದ ತಲೆ ಭಾಗಕ್ಕೆ ನೀರು ಹಾಕಿಕೊಳ್ಳುತ್ತ ಸಂಕಟ ಪಡುತ್ತಿತ್ತು.

ಆನೆಗೆ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಅದರ ರಕ್ಷಣೆಗೆ ಎರಡು ದಿನಗಳಿಂದ ಕಾರ್ಯಾಚರಣೆ ಮಾಡುತ್ತಿದ್ದಅರಣ್ಯ ಇಲಾಖೆ ಸಿಬ್ಬಂದಿ, ಗುರುವಾರ ಕ್ರೇನ್ ಮೂಲಕ ದಡದವರೆಗೆ ತರುವ ಪ್ರಯತ್ನ ಮಾಡಿದರು. ಎರಡು ಗಂಟೆಗೂ ಹೆಚ್ಚು ಕಾಲ ಆನೆಯ ಕಾಲಿಗೆ ಪಟ್ಟಿ ಹಾಕಿ ದಡಸೇರಿಸಲುಶ್ರಮಿಸಿದರು. ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಡಾ.ವಿನಯ ನೇತೃತ್ವದ ತಂಡದವರು ಚಿಕಿತ್ಸೆ ಕೊಡಲುಗುರುವಾರ ಮಧ್ಯಾಹ್ನ ಬಂದಿದ್ದರು.ಆದರೆ, ಹೆಣ್ಣಾನೆ ದಡಕ್ಕೆ ಬರುತ್ತಿದ್ದಂತೆ ಉಸಿರು ನಿಲ್ಲಿಸಿತು. ಇದರಿಂದಅಲ್ಲಿ ಸೇರಿದ್ದವರು ಅಸಹಾಯಕರಾಗಿ ಮರುಗಿದರು.

ADVERTISEMENT

ದೇಹದಲ್ಲಿ ಗಂಭೀರ ಗಾಯ:‘20 ವರ್ಷದ ಒಳಗಿನ ಆನೆ ಇದಾಗಿದೆ. ಅದರ ಚರ್ಮ ಪದರು ಬಿದ್ದಂತೆ ಇರುವುದು ನೋಡಿದರೆ ಎಂಟು, ಹತ್ತುದಿನಗಳಿಂದ ಸಮರ್ಪಕವಾಗಿ ಆಹಾರ ಸೇವಿಸಿರಲಿಕ್ಕಿಲ್ಲ. ಕಣ್ಣು, ಕಿವಿ ಸೇರಿದಂತೆ ತಲೆಯ ಭಾಗದಲ್ಲಿ ಗಂಭೀರ ಸ್ವರೂಪದ ಗಾಯಗಳು ಕಂಡು ಬಂದಿವೆ. ಹುಳಗಳು ಬಿದ್ದು ಸೆಪ್ಟಿಮಿಯಾ ಆವರಿಸಿದ್ದು,ದೇಹದ ತುಂಬ ಆಗಿರುವ ಸಾಧ್ಯತೆ ಇದೆ.ನೋವನ್ನು ಕಡಿಮೆ ಮಾಡಿಕೊಳ್ಳಲು ನೀರಿನಲ್ಲಿ ಮಲಗುವುದು ಆನೆಯ ಸ್ವಭಾವ’ ಎಂದು ಡಾ.ವಿನಯ್ ಹೇಳಿದರು.

‘ಕೆಲವೊಮ್ಮೆ ಆನೆಗಳು ಗಾಯಗೊಂಡರೂ ಕಾಡಿನಲ್ಲಿ ಸಿಗುವ ತೊಗಟೆ ತಿಂದು ಹಾಗೂ ಮಣ್ಣನ್ನು ಮೈಗೆ ಹಾಕಿಕೊಂಡು ಗುಣಪಡಿಸಿಕೊಳ್ಳುತ್ತವೆ. ಈ ಆನೆಗೆ ಒಂದು ಕಣ್ಣಿನ ದೃಷ್ಟಿ ಇರಲಿಕ್ಕಿಲ್ಲ.ಬಾಲವೂ ಚಿಕ್ಕದಾಗಿ, ಕಿವಿಯೂ ತುಂಡರಿಸಿದೆ. ಹುಳಗಳ ಸಂಖ್ಯೆ ಜಾಸ್ತಿಯಾಗಿ ಗಂಭೀರ ಸ್ವರೂಪ ಪಡೆದಿರುವ ಸಾಧ್ಯತೆ ಇದೆ’ ಎಂದರು.

‘ಈ ಆನೆ ಕೆಲವು ದಿನಗಳ ಹಿಂದೆ ಕ್ಯಾತ್ನಳ್ಳಿ ಅರಣ್ಯ ಪ್ರದೇಶದಲ್ಲಿ ಕಂಡುಬಂದಿತ್ತು. ನಂತರ ಬೇರೆ ಕಡೆಗೆ ಸಂಚರಿಸಿತ್ತು. ಎರಡು ದಿನಗಳಿಂದ ಈ ಕೆರೆಯಲ್ಲಿ ಕಂಡುಬಂದಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ.ವಾಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.