ADVERTISEMENT

ಎತ್ತಿನಹೊಳೆ ಕಾಮಗಾರಿಯಲ್ಲಿ ಅನರ್ಹರಿಗೆ ಗುತ್ತಿಗೆ; ಸಿಎಜಿ

ಆರ್ಥಿಕ, ತಾಂತ್ರಿಕ ಸಾಮರ್ಥ್ಯ ಪರಿಗಣಿಸದೆ ಕಾಮಗಾರಿಯ ಹೊಣೆ: ಸಿಎಜಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 16:11 IST
Last Updated 29 ಜನವರಿ 2026, 16:11 IST
<div class="paragraphs"><p>ಎತ್ತಿನಹೊಳೆ ಯೋಜನೆ ಕಾಲುವೆ ಕಾಮಗಾರಿ.</p></div>

ಎತ್ತಿನಹೊಳೆ ಯೋಜನೆ ಕಾಲುವೆ ಕಾಮಗಾರಿ.

   

ಬೆಂಗಳೂರು: ಆರ್ಥಿಕ ಮತ್ತು ತಾಂತ್ರಿಕ ಸಾಮರ್ಥ್ಯ ಇಲ್ಲದ ಏಳು ಗುತ್ತಿಗೆದಾರರಿಗೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಶೇ 67ರಷ್ಟು ಕಾಮಗಾರಿಗಳನ್ನು ನೀಡಿದ್ದರಿಂದಲೇ ಅನುಷ್ಠಾನ ವಿಳಂಬವಾಗಿದೆ ಎಂದು ಮಹಾಲೇಖಪಾಲರ ವರದಿ ಹೇಳಿದೆ.

ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾದ ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ’ ವರದಿಯಲ್ಲಿ ಈ ಆಕ್ಷೇಪ ಎತ್ತಲಾಗಿದೆ.

ADVERTISEMENT

₹14,805 ಕೋಟಿ ಮೊತ್ತದ 18 ಕಾಮಗಾರಿಗಳನ್ನು ಏಳು ಕಂಪನಿಗಳಿಗೆ, ಒಂದೇ ಕಂಪನಿಗೆ ₹5,216 ಕೋಟಿ ಮೊತ್ತದ 11 ಕಾಮಗಾರಿಗಳ ಗುತ್ತಿಗೆಯನ್ನು ನಿಯಮ ಉಲ್ಲಂಘಿಸಿ ನೀಡಲಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 16, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ 9 ಮತ್ತು ಹಿಂದಿನ ಬಿಜೆಪಿ ಸರ್ಕಾರದಲ್ಲಿ 4 ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ.

ಪ್ರಮಾಣಿತ ಟೆಂಡರ್‌ ದಾಖಲೆಗಳನ್ನು ಅಳವಡಿಸಿಕೊಳ್ಳದೆ ಕಾಮಗಾರಿಗಳ ಗುತ್ತಿಗೆಯನ್ನು ತರಾತುರಿಯಲ್ಲಿ ನೀಡಲಾಗಿದೆ. ಗುತ್ತಿಗೆ ನೀಡುವಾಗ ಗುತ್ತಿಗೆದಾರರ ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸಿಲ್ಲ. ಪರಿಣಾಮವಾಗಿ ಗುತ್ತಿಗೆದಾರರು ಹಣಕಾಸನ್ನು ಹೊಂದಿಸಿಕೊಳ್ಳಲಾಗದೆ ಕಾಮಗಾರಿಗಳನ್ನು ವಿಳಂಬ ಮಾಡಿದ್ದಾರೆ ಎಂದು ಸಿಎಜಿ ಹೇಳಿದೆ.

ಡಿಪಿಆರ್‌ ಸಿದ್ಧಪಡಿಸುವುದರಿಂದ ಆರಂಭವಾಗಿ, ಕಾಮಗಾರಿ ಗುತ್ತಿಗೆ ನೀಡುವಲ್ಲಿಯೂ ಗುತ್ತಿಗೆದಾರರಿಗೆ ತಾಂತ್ರಿಕ ಪರಿಣತಿ ಇಲ್ಲದಿರುವುದನ್ನು ಮತ್ತು ಅನನುಭವವನ್ನು ಕಡೆಗಣಿಸಲಾಗಿದೆ. ಹೀಗಾಗಿ ಯೋಜನೆಯ ವಿನ್ಯಾಸವನ್ನು ಪದೇ ಪದೇ ಬದಲಿಸಬೇಕಾಯಿತು. ಜತೆಗೆ ಕೆಲವು ಕಾಮಗಾರಿಗಳು ಸಂಪೂರ್ಣ ವ್ಯರ್ಥವಾದವು ಎಂದು ವರದಿಯಲ್ಲಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.