ADVERTISEMENT

ಶೀಘ್ರ ಸಾರ್ವಜನಿಕರ ಅವಗಾಹನೆಗೆ ಡಿಪಿಆರ್‌: ರೇವಣ್ಣ

ನಗರದಲ್ಲಿ ನಿರ್ಮಿಸಲು ಉದ್ದೇಶಿಸಿದ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2018, 19:30 IST
Last Updated 6 ಆಗಸ್ಟ್ 2018, 19:30 IST
   

ಬೆಂಗಳೂರು: ನಗರದಲ್ಲಿ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕಾಗಿ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಾರ್ವಜನಿಕರ ಅವಗಾಹನೆಗೆ ಕೂಡ ಬಿಡುಗಡೆ ಮಾಡಲಾಗುವುದು ಎಂದುಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಗುವುದು. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಇದೇ ವಾರ ಯೋಜನಾ ಪ್ರಕ್ರಿಯೆಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯ ಒಟ್ಟು ಅಂದಾಜು ವೆಚ್ಚದಲ್ಲಿ ಶೇ 50ರಷ್ಟು ಹಣ ಭೂಸ್ವಾಧೀನಕ್ಕೆ ಖರ್ಚಾಗುತ್ತದೆ. ಉಳಿದ ಮೊತ್ತ ರಸ್ತೆ ಕಾಮಗಾರಿಗೆ ಬೇಕಾಗುತ್ತದೆ. ಮೂರು ಹಂತಗಳಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದರು.

ADVERTISEMENT

‘ಎಲಿವೇಟೆಡ್‌ ಕಾರಿಡಾರ್‌ ನಮ್ಮ ಇಲಾಖೆಗೆ ಕೊಡಿ ಎಂದು ನಾನು ಕೇಳಲಿಲ್ಲ. ರಸ್ತೆ ನಿಗಮದಿಂದ ಇದನ್ನು ಜಾರಿಗೊಳಿಸಲಾಗುತ್ತದೆ. ರಸ್ತೆ ನಿಗಮ ನಮ್ಮ ಇಲಾಖೆಯ ಅಧೀನಕ್ಕೆ ಬರುತ್ತದೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಬೇರೆ ಇಲಾಖೆಯವರು ಮಾಡುವುದಿದ್ದರೆ ಸಂತೋಷದಿಂದ ಬಿಟ್ಟುಕೊಡುತ್ತೇನೆ’ ಎಂದು ಅವರು ಹೇಳಿದರು.

‘ಈ ಯೋಜನೆಗೆ 2007 ರಲ್ಲಿಯೇ ಒಪ್ಪಿಗೆ ನೀಡಲಾಗಿತ್ತು. ಆಗಲೂ ನಾನು ಲೋಕೋಪಯೋಗಿ ಸಚಿವನಾಗಿದ್ದೆ. ಆದರೆ, ಆ ಬಳಿಕ ಬಂದ ಸರ್ಕಾರಗಳು ಅದನ್ನು ಕಾರ್ಯಗತ ಮಾಡಲು ಮುಂದಾಗಲಿಲ್ಲ. ನಗರಾಭಿವೃದ್ಧಿ ಇಲಾಖೆಯಾಗಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಲಿ ಅನುಷ್ಠಾನ ಮಾಡಲಿಲ್ಲ’ ಎಂದು ರೇವಣ್ಣ ತಿಳಿಸಿದರು.

ಬೆಂಗಳೂರು– ಮೈಸೂರು ರಸ್ತೆ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿ ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳುತ್ತದೆ. ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾಮಗಾರಿಯ ಪ್ರಗತಿಯ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಪರಿಶೀಲನಾ ಸಭೆ ನಡೆಯುತ್ತದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.