ADVERTISEMENT

ಪಡಿತರ ಚೀಟಿಗಾಗಿ ಪರದಾಟ: 4.76 ಲಕ್ಷ ಅರ್ಜಿಗಳಲ್ಲಿ, 2.76 ಲಕ್ಷ ಪರಿಗಣನೆಗೆ ಆದೇಶ

ಬಾಕಿ ಉಳಿದ 4.76 ಲಕ್ಷ ಅರ್ಜಿಗಳು: 2.76 ಲಕ್ಷ ಅರ್ಜಿ ಪರಿಗಣಿಸಲು ಸೂಚನೆ

ಸಚ್ಚಿದಾನಂದ ಕುರಗುಂದ
Published 10 ಡಿಸೆಂಬರ್ 2021, 20:39 IST
Last Updated 10 ಡಿಸೆಂಬರ್ 2021, 20:39 IST
ಪಡಿತರ ಚೀಟಿಗಾಗಿ ಪರದಾಟ
ಪಡಿತರ ಚೀಟಿಗಾಗಿ ಪರದಾಟ   

ಬೆಂಗಳೂರು: ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳು ಮತ್ತೊಮ್ಮೆ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ.

ಬಿಪಿಎಲ್ ಚೀಟಿ ಕೋರಿ ಸಲ್ಲಿಕೆಯಾಗಿರುವ 4.76 ಲಕ್ಷ ಅರ್ಜಿಗಳಲ್ಲಿ, 2.76 ಲಕ್ಷ ಅರ್ಜಿಗಳನ್ನು ಮಾತ್ರ ಪರಿಗಣಿಸುವಂತೆ ಸರ್ಕಾರ ಡಿ.3ರಂದು ಆದೇಶ ಹೊರಡಿಸಿದೆ. ಇದರಿಂದಾಗಿ ಪಡಿತರ ಚೀಟಿ ಪಡೆಯುವ ಅವಕಾಶದಿಂದ ವಂಚಿತರಾಗಬೇಕಾಗುತ್ತದೆ ಎನ್ನುವ ಆತಂಕ ಬಡ ಜನರಲ್ಲಿ ವ್ಯಕ್ತವಾಗಿದೆ.

2018ರಿಂದಲೂ ಆದ್ಯತಾ ಪಡಿತರ ಚೀಟಿಗಳಿಗಾಗಿ (ಬಡತನ ರೇಖೆಗಿಂತ ಕೆಳಗಿರುವ– ಬಿಪಿಎಲ್‌) ಸಲ್ಲಿಸಿರುವ ಈ ಅರ್ಜಿಗಳು ಪರಿಶೀಲನೆಗೆ ಬಾಕಿ ಉಳಿದಿವೆ.

ADVERTISEMENT

1.55 ಲಕ್ಷ ಕುಟುಂಬಗಳಿಗೆ ಆದ್ಯತೇತರ ಪಡಿತರ ಚೀಟಿ (ಎಪಿಎಲ್‌) ವಿತರಿಸುವಂತೆಯೂ ಸರ್ಕಾರ ಆಹಾರ ಇಲಾಖೆಗೆ ಸೂಚಿಸಿದೆ.

ಪಡಿತರ ಚೀಟಿಗಾಗಿ ಹೊಸ ಅರ್ಜಿಗಳ ಸ್ವೀಕಾರ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ. ಮತ್ತೊಂದೆಡೆ, ಬಾಕಿ ಉಳಿದಿರುವ ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿ ನಿಧಾನಗತಿಯಲ್ಲಿ ಸಾಗುತ್ತಿದೆ.

ಅರ್ಜಿಗಳ ವಿಲೇವಾರಿಗೆ ಮಿತಿ ಹೇರುವುದು ಸಲ್ಲದು. ಬಾಕಿ ಉಳಿದಿರುವ ಎಲ್ಲ ಅರ್ಜಿಗಳ ಪರಿಶೀಲನೆ ಕೈಗೊಂಡು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂಬುದು ಅರ್ಜಿ ಸಲ್ಲಿಸಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಕುಟುಂಬಗಳ ಆಗ್ರಹವಾಗಿದೆ.

‘ದಿನಕ್ಕೆ ಒಂದು ಸಾವಿರದಿಂದ ಎರಡು ಸಾವಿರ ಮಂದಿ ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಕೋವಿಡ್‌ ಮತ್ತು ಚುನಾವಣೆಗಳ ಕಾರಣಕ್ಕೆ ಅರ್ಜಿಗಳ ವಿಲೇವಾರಿ ವಿಳಂಬ
ವಾಗಿದೆ. ವಿಧಾನ ಪರಿಷತ್‌ ಚುನಾವಣೆಯಿಂದಾಗಿ ಸದ್ಯ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆ ಪ್ರಕ್ರಿಯೆ ಮುಗಿದ ತಕ್ಷಣ ಪಡಿತರ ಚೀಟಿಗಳ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಆಹಾರ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಅರ್ಜಿಗಳ ಪ್ರಾಥಮಿಕ ಪರಿಶೀಲನೆ ಮಾಡಲಾಗಿದೆ. ಮಾನದಂಡಗಳನ್ನು ಪರಿಶೀಲಿಸಿಯೇ ಅರ್ಹರಿಗೆ ಪಡಿತರ ಚೀಟಿಗಳನ್ನು ನೀಡಲಾಗುವುದು. ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ಪರಿಶೀಲಿಸಲಾಗಿದೆ. ಅರ್ಜಿದಾರರ ಸ್ಥಳ ಪರಿಶೀಲನೆಯನ್ನು ಸ್ಥಳೀಯ ಅಧಿಕಾರಿಗಳು ಕೈಗೊಂಡಿದ್ದಾರೆ' ಎಂದು ಅವರು ಹೇಳಿದ್ದಾರೆ.

‘ಹೆಸರು, ವಿಳಾಸ ಅಥವಾ ಇತರ ಮಾಹಿತಿಯ ಸೇರ್ಪಡೆಗೆ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಕಡಿಮೆ. ಸೇರ್ಪಡೆ ಅಥವಾ ತಿದ್ದುಪಡಿಯ ಬದಲು ಹೊಸದಾಗಿಯೇ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಿಂದಲೂ ಅರ್ಜಿಗಳ ಸಂಖ್ಯೆ ಹೆಚ್ಚಳವಾಗಿದೆ’ ಎಂದು ತಿಳಿಸಿದ್ದಾರೆ.

‘ವ್ಯವಸ್ಥೆ ಬುಡಮೇಲು ಮಾಡುವ ಹುನ್ನಾರ’

‘ರಾಜ್ಯದಲ್ಲಿ 1.45 ಕೋಟಿಗೂ ಹೆಚ್ಚು ಮಂದಿ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ ಹೊಂದಿದ್ದಾರೆ. ಪಡಿತರ ಚೀಟಿ ನೀಡುವುದನ್ನು ವಿಳಂಬ ಮಾಡುವ ಮೂಲಕ ಈ ವ್ಯವಸ್ಥೆಯನ್ನೇ ತೆಗೆದು ಹಾಕುವ ಹುನ್ನಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ್‌ ಆರೋಪಿಸಿದರು.

‘ಕೋವಿಡ್‌ ಮತ್ತು ಅತಿವೃಷ್ಟಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ, ಸರ್ಕಾರಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.