ADVERTISEMENT

ಬಿಜೆಪಿ ಆತ್ಮಾವಲೋಕನಕ್ಕೆ ಒತ್ತಾಯ

ಅಭ್ಯರ್ಥಿಯ ನಿವೃತ್ತಿ ಪಕ್ಷಕ್ಕೆ ಎಚ್ಚರಿಕೆ ಗಂಟೆ: ಈಶ್ವರಪ್ಪ, ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 20:00 IST
Last Updated 1 ನವೆಂಬರ್ 2018, 20:00 IST
   

ಬೆಂಗಳೂರು: ರಾಮನಗರ ಕ್ಷೇತ್ರದ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬೆಳವಣಿಗೆ ಬಿಜೆಪಿಯಲ್ಲಿ ತಳಮಳ ಉಂಟು ಮಾಡಿದೆ.

‘ಇತ್ತೀಚಿನ ದಿನಗಳಲ್ಲಿ ಪಕ್ಷ ದಿಟ್ಟ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಹಳಿ ತಪ್ಪುತ್ತಿರುವ ಮತ್ತು ಉಸ್ತುವಾರಿ ಹೊತ್ತವರ ಅಸಡ್ಡೆ ಪಕ್ಷಕ್ಕೆ ಹಾನಿ ಉಂಟು ಮಾಡಿದೆ. ಈ ಬಗ್ಗೆ ಆತ್ಮಾವಲೋಕನ ನಡೆಯಬೇಕು’ ಎಂಬ ಒತ್ತಾಯ ಬಿಜೆಪಿ ವಲಯದಲ್ಲಿ ಕೇಳಿಬಂದಿದೆ.

‘ರಾಮನಗರದ ಉಸ್ತುವಾರಿಯನ್ನು ಮೊದಲಿಗೆ ಶಾಸಕ ಆರ್‌. ಅಶೋಕ್‌ ಅವರಿಗೆ ವಹಿಸಲಾಗಿತ್ತು. ಅಭ್ಯರ್ಥಿ ಆಯ್ಕೆಯ ಬಳಿಕ ಅವರು ಅತ್ತ ತಲೆ ಹಾಕಲಿಲ್ಲ. ಜಿದ್ದಾಜಿದ್ದಿ ಹೋರಾಟಕ್ಕೆ ಇಳಿಯಬೇಕಾಗಿದ್ದ ಉಸ್ತುವಾರಿ ಅಶೋಕ್‌, ಸದ್ದಿಲ್ಲದೆ ಜವಾಬ್ದಾರಿಯನ್ನು ಡಿ.ವಿ. ಸದಾನಂದಗೌಡರ ಹೆಗಲಿಗೆ ಹಾಕಿ ಹೋದರು. ಇದೂ ಹೊಂದಾಣಿಕೆಯ ರಾಜಕೀಯವೇ’ ಎಂಬ ಚರ್ಚೆ ಪಕ್ಷದಲ್ಲಿ ಆರಂಭವಾಗಿದೆ.

ADVERTISEMENT

ಪಕ್ಷದ ಕಾರ್ಯಕರ್ತರಿಗೆ ಟಿಕೆಟ್‌ ನೀಡಿ ಬೆಳೆಸುವುದನ್ನು ಬಿಟ್ಟು, ಸ್ವಂತ ಲಾಭಕ್ಕಾಗಿ ಬೇರೆ ಪಕ್ಷದವರನ್ನು ಕರೆತಂದು ಮಣೆ ಹಾಕಲಾಗುತ್ತಿದೆ. ಈ ಪ್ರವೃತ್ತಿಗೆ ತಕ್ಕ ಶಾಸ್ತಿಯಾಗಿದೆ. ಪಕ್ಷದಲ್ಲಿ ನಿಯಂತ್ರಣ, ನಾಯಕರಲ್ಲಿ ಉತ್ತರದಾಯಿತ್ವವೇ ಮರೆತು ಹೋಗಿದೆ. 104 ಸ್ಥಾನಗಳನ್ನು ಗೆದ್ದು ಬಹುದೊಡ್ಡ ಪಕ್ಷವಾಗಿ ಮೂಡಿಬಂದ ಬಳಿಕ, ಹೊಂದಾಣಿಕೆಯ ಮೂಲಕ ಅಧಿಕಾರ ಹಿಡಿಯುವ ಕಡೆಗೆ ಮುಖ ಮಾಡಬೇಕಿತ್ತು. ಅದರ ಬದಲು ನಿಸ್ತೇಜವಾಗಲು ಕಾರಣವೇನು ಎಂಬ ಪ್ರಶ್ನೆಯೂ ಪಕ್ಷದ ವಲಯದಲ್ಲಿ ಕೇಳಿಬಂದಿದೆ.

ಎಚ್ಚರಿಕೆ ಗಂಟೆ:‘ಚಂದ್ರಶೇಖರ್ ಯಾಕೆ ಬಂದರು, ಯಾಕೆ ವಾಪಸ್‌ ಹೋದರು ಎಂಬುದನ್ನು ಅವರೇ ಹೇಳಬೇಕು. ಒಟ್ಟಿನಲ್ಲಿ ಇದು ನಮಗೆ ಎಚ್ಚರಿಕೆಯ ಗಂಟೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಅವರನ್ನು ಪಕ್ಷಕ್ಕೆ ಯಾರು ಕರೆತಂದರು, ಯಾವ ಕಾರಣಕ್ಕಾಗಿ ಬಂದರು ಎಂಬುದು ನನಗಂತೂ ಗೊತ್ತಿಲ್ಲ. ಅವರನ್ನು ಕರೆ ತಂದವರು ಮತ್ತು ಬಿಟ್ಟು ಹೋದವರನ್ನು ಕೇಳಿದರೆ ಮಾತ್ರ ಉತ್ತರ ಸಿಗುತ್ತದೆ’ ಎಂದರು.

ಅನುಮಾನವಿದ್ದ ಕಾರಣ ಪ್ರಚಾರಕ್ಕೆ ಹೋಗಲಿಲ್ಲ:‘ನನಗೆ ಮೊದಲೇ ಅವರ ಬಗ್ಗೆ ಅನುಮಾನವಿದ್ದ ಕಾರಣ ರಾಮನಗರದಲ್ಲಿ ಚುನಾವಣಾ ಪ್ರಚಾರ ನಡೆಸಿರಲಿಲ್ಲ. ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಹಣದ ಬಲದಿಂದ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಹಿಂದೆ ಸರಿಸಿದ್ದಾರೆ’ ಎಂದೂ ದೂರಿದರು.

ನಮ್ಮಿಂದ ತಪ್ಪಾಗಿದೆ: ‘ನಮ್ಮಿಂದ ತಪ್ಪಾಗಿದೆ. ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸುತ್ತೇವೆ. ಇದನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಕಾರ್ಯಕರ್ತರು ಅಧೀರರಾಗಬಾರದು. ಇದು ಪಕ್ಷಕ್ಕೆ ಎಚ್ಚರಿಕೆಯ ಪಾಠ. ಇದರ ಹಿಂದೆ ದೊಡ್ಡ ರಾಜಕೀಯ ಪಿತೂರಿ ನಡೆದಿದೆ. ನಮ್ಮ ಹೊಸ ಪ್ರಯೋಗ ವಿಫಲವಾಗಿದೆ’ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಹಣದ ಆಮಿಷಕ್ಕೆ ಬಲಿ: ‘ಚಂದ್ರಶೇಖರ್‌ ಹಣದ ಆಮಿಷಕ್ಕೆ ಬಲಿಯಾಗಿ ಕಣದಿಂದ ಹಿಂದಕ್ಕೆ ಸರಿದಿದ್ದಾರೆ’ ಎಂದು ಶಾಸಕ ಆರ್‌. ಅಶೋಕ್‌ ಹೇಳಿದರು.

‘ಮಗನ ನಿರ್ಧಾರ ಅನೈತಿಕ, ಆತ್ಮದ್ರೋಹ’

ಬಳ್ಳಾರಿ: ‘ಉಪಚುನಾವಣೆ ಕಣದಿಂದ ನನ್ನ‌ ಮಗ ಹಿಂದೆ ಸರಿದಿರುವುದು ಏಕೆ ಎಂಬುದು ಗೊತ್ತಿಲ್ಲ. ಆದರೆ ಅದೊಂದು ರಾಜಕೀಯ ಆತ್ಮಹತ್ಯೆ ಯತ್ನ ಮತ್ತು ಆತ್ಮದ್ರೋಹದ‌ ಕೆಲಸ' ಎಂದು ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಸಿ.ಎಂ. ಲಿಂಗಪ್ಪ ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ನನ್ನ ಮಗ (ಚಂದ್ರಶೇಖರ್) ಹೇಡಿಯಂತೆ‌ ವರ್ತಿಸಿದ್ದಾನೆ. ಒಂದೇ ಮನೆಯಲ್ಲಿ ವಾಸವಿದ್ದರೂ ಆತನನ್ನು ನಾನು ಭೇಟಿಯಾಗಲಾರೆ' ಎಂದರು.

'ಮತದಾನಕ್ಕೆ ಎರಡು ದಿನ ಇರುವಾಗ ನಡೆದಿರುವ ಈ ಘಟನೆ ಅನೈತಿಕ. ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ ನನ್ನ ಮಗ ಹೀಗೆ ಮಾಡಬಾರದಾಗಿತ್ತು. ಕಣದಲ್ಲಿ ಉಳಿದು ಸ್ಪರ್ಧೆ ಎದುರಿಸಬೇಕಾಗಿತ್ತು‌' ಎಂದು ಅಭಿಪ್ರಾಯಪಟ್ಟರು.

‘ಪಕ್ಷದ ಎಲ್ಲ ಮುಖಂಡರ ಒಮ್ಮತದ ಅಭಿಪ್ರಾಯದಿಂದ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಆದರೆ, ಅವರು ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್‌ ಮುಖಂಡರೊಂದಿಗೆ ತೆರಳಿದ್ದಾರೆ’ ಎಂದರು.

* ರಾಮನಗರದಲ್ಲಿ ಪ್ರತಿಸ್ಪರ್ಧಿಯೇ ಇಲ್ಲದಂತೆ ಮಾಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರದ್ದು ಪ್ರಜಾಪ್ರಭುತ್ವ ವಿರೋಧಿ ನಡೆ

-ಬಿ.ಶ್ರೀರಾಮುಲು, ಬಿಜೆಪಿ ಶಾಸಕ

* ಯಾವೊಬ್ಬ ಬಿಜೆಪಿ ಮುಖಂಡರನ್ನೂ ನಾನು ಸಂಪರ್ಕ ಮಾಡಿಲ್ಲ. ಅವರು ಮಾಡುತ್ತಿರುವ ಕೀಳು ಆರೋಪಗಳಿಗೆ ಉತ್ತರ ನೀಡುವುದಿಲ್ಲ

-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.