ADVERTISEMENT

ಕೆಲಸಕ್ಕಾಗಿ ಯೋಧನ ಪತ್ನಿ ಅಲೆದಾಟ: ಮಾತು ಮರೆತ ಸಿಎಂ

ಸಿ.ಎಂ ಆದರೆ ಉದ್ಯೋಗ ನೀಡುವುದಾಗಿ ತಿಳಿಸಿದ್ದ ಬಿಎಸ್‌ವೈ

ಬಾಲಕೃಷ್ಣ ಪಿ.ಎಚ್‌
Published 27 ಜನವರಿ 2020, 19:52 IST
Last Updated 27 ಜನವರಿ 2020, 19:52 IST
ಹುತಾತ್ಮ ಯೋಧ ಜಾವಿದ್‌ ಅವರ ತಂದೆ, ಪತ್ನಿ, ಮಗಳು
ಹುತಾತ್ಮ ಯೋಧ ಜಾವಿದ್‌ ಅವರ ತಂದೆ, ಪತ್ನಿ, ಮಗಳು   

ದಾವಣಗೆರೆ: ರಾಜಸ್ಥಾನದ ಪೋಕ್ರಾನ್‌ ಅಣುಬಾಂಬ್‌ ತರಬೇತಿ ಕೇಂದ್ರದಲ್ಲಿ ಸೇನಾ ತರಬೇತಿ ವೇಳೆ ಬಾಂಬ್‌ ಸ್ಫೋಟವಾಗಿ ಹರಿಹರದ ಯೋಧ ಜಾವಿದ್‌ ಕೆ. (31) ವೀರಮರಣವನ್ನಪ್ಪಿ ಎರಡು ವರ್ಷಗಳಾಗಿವೆ. ಅವರ ಪತ್ನಿ ಸರ್ತಾಜ್‌ಬಾನು ತನ್ನಿಬ್ಬರು ಪುಟ್ಟ ಮಕ್ಕಳನ್ನು ಕರೆದುಕೊಂಡು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಜಾವಿದ್‌ ಅವರು 2018ರ ಫೆ.12ರಂದು ಹುತಾತ್ಮರಾಗಿದ್ದರು. ವಿಧಾನಸಭೆ ಚುನಾವಣೆ ಘೋಷಣೆ ಯಾಗಿ ನೀತಿ ಸಂಹಿತೆ ಜಾರಿಯಲ್ಲಿತ್ತು. ‘ಯೋಧನ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 10 ಲಕ್ಷ ನೀಡಬೇಕು. ಯೋಧನ ಪತ್ನಿ ಪದವೀಧರೆಯಾಗಿದ್ದು, ಆಕೆಗೆ ಕೆಲಸ ನೀಡಬೇಕು’ ಎಂದು ಆಗ ಅವರ ಮನೆಗೆ ಭೇಟಿ ನೀಡಿದ್ದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಆಗ್ರಹಿಸಿದ್ದರು.

ಮನೆಗೆ ಭೇಟಿ ನೀಡಿದ್ದ ಆಗಿನ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಮರುದಿನ ದಾವಣಗೆರೆಯಲ್ಲಿ ಭೇಟಿಯಾಗುವಂತೆ ತಿಳಿಸಿದ್ದರು. ಆದರೆ ಮರುದಿನ ಭೇಟಿಗೆ ಅವಕಾಶವೇ ಸಿಕ್ಕಿರಲಿಲ್ಲ. ಸಿದ್ದರಾಮಯ್ಯ, ಪರಮೇಶ್ವರ್‌ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

ADVERTISEMENT

ಕುಮಾರಸ್ವಾಮಿ ಭೇಟಿಯಾಗಿದ್ದರು. ಹೀಗೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಎಲ್ಲ ಪಕ್ಷದ ನಾಯಕರು ಭೇಟಿಯಾಗಿ ಹೋಗಿದ್ದರು.

ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಈಗ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಯಾರೂ ಈ ಬಗ್ಗೆ ಸ್ಪಂದಿಸಿಲ್ಲ. ‘ಈ ಸರ್ಕಾರಕ್ಕೆ ಯೋಧರ ಬಗ್ಗೆ ಕಾಳಜಿ ಇಲ್ಲ’ ಎಂದು ಆಗ ಟೀಕಿಸಿದ್ದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಐದು ತಿಂಗಳುಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ.

‘2013ರಲ್ಲಿ ಜಾವಿದ್‌ ಜತೆ ನನ್ನ ಮದುವೆಯಾಯಿತು. 2018ರಲ್ಲಿ ಅವರು ಹುತಾತ್ಮರಾದರು. ನನಗೆ ಅಮೀನಾ ಕೈಸರ್‌ ಮತ್ತು ಜವೇರಾ ಆಯತ್‌ ಎಂಬ ಐದು ಮತ್ತು ಮೂರು ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪದವೀಧರಳಾಗಿರುವ ನನಗೆ ಒಂದು ಉದ್ಯೋಗ ಕೊಡಿ ಎಂದು ವಿವಿಧ ಇಲಾಖೆಗಳಿಗೆ ಎರಡು ವರ್ಷ
ಗಳಿಂದ ಅಲೆಯುತ್ತಿದ್ದೇನೆ. ಎಲ್ಲೂ ಉದ್ಯೋಗ ಸಿಕ್ಕಿಲ್ಲ’ ಎಂದು ಸರ್ತಾಜ್‌ಬಾನು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

‘ಮಗ ಹುತಾತ್ಮನಾದ ಬಳಿಕ ಎಲ್ಲ ನಾಯಕರು ನಮ್ಮ ಮನೆಗೆ ಬಂದಿದ್ದರು. ಚುನಾವಣೆಯ ಸಂದರ್ಭ ಆಗಿದ್ದರಿಂದ ಎಲ್ಲರೂ ಭರವಸೆ ನೀಡಿ ಹೋಗಿದ್ದರು. ನಾನು ಮುಖ್ಯಮಂತ್ರಿ ಆದರೆ 48 ಗಂಟೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಯಾವ ಭರವಸೆಯೂ ಈಡೇರಿಲ್ಲ’ ಎಂದು ಜಾವಿದ್‌ನ ತಂದೆ ಅಬ್ದುಲ್‌ ಖಾದರ್‌ ಸಾಬ್‌ ಬೇಸರ ವ್ಯಕ್ತಪಡಿಸಿದರು.

ಜಾವಿದ್‌ 2005ರಲ್ಲಿ ಸೈನ್ಯಕ್ಕೆ ಸೇರಿದ್ದರು. ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನಲ್ಲಿ (ಎಂಇಜಿ)ನಲ್ಲಿ ನಾಯಕ್ ಹುದ್ದೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.