ADVERTISEMENT

19ರಂದು ವಿಚಾರಣೆಗೆ ಹಾಜರಾಗುವಂತೆ ಡಿಕೆ ಶಿವಕುಮಾರ್‌ಗೆ ಇ.ಡಿ. ಸಮನ್ಸ್‌

ಹಣ ಅಕ್ರಮ ವರ್ಗಾವಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 10:21 IST
Last Updated 15 ಸೆಪ್ಟೆಂಬರ್ 2022, 10:21 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌    

ನವದೆಹಲಿ:ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್‌ ಜಾರಿ ಮಾಡಿದೆ.

ಇದೇ 19ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸೂಚಿಸಿದೆ. ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಅಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಕಾಲಾವಕಾಶ ನೀಡಬೇಕು ಎಂದು ಪತ್ರ ಬರೆಯಲು ಶಿವಕುಮಾರ್ ತೀರ್ಮಾನಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

‘ಭಾರತ್‌ ಜೋಡೊ ಯಾತ್ರೆ (ಭಾರತ ಒಗ್ಗೂಡಿಸಿ ಯಾತ್ರೆ) ಹಾಗೂ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ವೇಳೆಯಲ್ಲೇ ಇ.ಡಿ. ನನಗೆ ಸಮನ್ಸ್‌ ನೀಡಿದೆ. ವಿಚಾರಣೆಗೆ ಸಹಕರಿಸಲು ನಾನು ಸಿದ್ಧನಿದ್ದೇನೆ. ಆದರೆ, ಸಮನ್ಸ್‌ ನೀಡಿರುವ ಸಮಯ ಹಾಗೂ ಕಿರುಕುಳದಿಂದ ನನ್ನ ಸಾಂವಿಧಾನಿಕ ಹಾಗೂ ರಾಜಕೀಯ ಕರ್ತವ್ಯಗಳನ್ನು ನಿಭಾಯಿಸಲು ಅಡ್ಡಿಯಾಗುತ್ತಿದೆ’ ಎಂದು ಶಿವಕುಮಾರ್ ಟ್ವೀಟ್‌ ಮಾಡಿದ್ದಾರೆ.

ADVERTISEMENT

2017ರಲ್ಲಿ ಶಿವಕುಮಾರ್‌ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದರು. ಆಗ, ದೆಹಲಿಯ ವಿವಿಧ ಸ್ಥಳಗಳಲ್ಲಿ ₹8.59 ಕೋಟಿ ನಗದು ವಶಕ್ಕೆ ಪಡೆಯಲಾಗಿತ್ತು. ಬಳಿಕ ಶಿವಕುಮಾರ್‌ ಅವರನ್ನು ಬಂಧಿಸಲಾಯಿತು. ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು.ಎಲ್ಲ ಆರೋಪಿಗಳಿಗೆ ದೆಹಲಿ ಹೈಕೋರ್ಟ್‌ ಈ ಹಿಂದೆ ಮಧ್ಯಂತರ ಜಾಮೀನು ನೀಡಿತ್ತು.

ಶಿವಕುಮಾರ್‌, ಅವರ ನಿಕಟವರ್ತಿಗಳಾದ ಉದ್ಯಮಿ ಸಚಿನ್‌ ನಾರಾಯಣ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ ಮಾಲೀಕ ಸುನೀಲ್‌ ಕುಮಾರ್‌ ಶರ್ಮಾ, ದೆಹಲಿಯ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್‌. ವಿರುದ್ಧ ವಿಚಾರಣೆ ಆರಂಭಿಸುವಂತೆ ಕೋರಿ ಚುನಾಯಿತ ಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ (ಇ.ಡಿ. ನ್ಯಾಯಾಲಯ) ಇ.ಡಿ. ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು. ಈ ವರದಿಯನ್ನು ಮಾನ್ಯ ಮಾಡಿದ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ಎಲ್ಲ ಆರೋಪಿಗಳಿಗೂ ಸಮನ್ಸ್‌ ಜಾರಿ ಮಾಡಿತ್ತು.ಐವರು ಆರೋಪಿಗಳಿಗೆ ನ್ಯಾಯಾಲಯವು ಆಗಸ್ಟ್‌ 2ರಂದು ಜಾಮೀನು ನೀಡಿತ್ತು.

ಆಗಸ್ಟ್‌ 16ರಂದು ನಡೆದ ವಿಚಾರಣೆ ವೇಳೆಆರೋಪಿಗಳು, ಆರೋಪಪಟ್ಟಿಯ ಜತೆಗೆ ಇ.ಡಿ. ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಎಲ್ಲ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದ್ದರು. ಇ.ಡಿ. ಪರ ವಕೀಲರು, ‘ಈ ದಾಖಲೆಗಳನ್ನು ಕೂಡಲೇ ಸಲ್ಲಿಸಲು ಆಗುವುದಿಲ್ಲ. ನಾಲ್ಕೈದು ವಾರಗಳ ಕಾಲಾವಕಾಶ ಬೇಕು’ ಎಂದು ಹೇಳಿದ್ದರು. ಅವರ ವಾದವನ್ನು ಸಮ್ಮತಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್‌ 27ಕ್ಕೆ ಮುಂದೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.