ADVERTISEMENT

ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:37 IST
Last Updated 17 ಜೂನ್ 2025, 15:37 IST
<div class="paragraphs"><p>ಸಿದ್ದರಾಮಯ್ಯ ಅವರು ‘ರಾಜ್ಯ ಪರಿಸರ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು. ಸಲೀಂ ಅಹಮದ್‌, ದಿನೇಶ್ ಗುಂಡೂರಾವ್, ಪಿ.ಎಂ.ನರೇಂದ್ರಸ್ವಾಮಿ, ಅಶೋಕ ಪಟ್ಟಣ, ಮೋಹನ್ ಕೊಂಡಜ್ಜಿ, ಡಿ.ಕೆ.ಶಿವಕುಮಾರ್, ಈಶ್ವರ ಬಿ. ಖಂಡ್ರೆ, ಡಾ.ಎಂ.ಸಿ. ಸುಧಾಕರ್‌, ಎ.ಎಸ್. ಪೊನ್ನಣ್ಣ ಉಪಸ್ಥಿತರಿದ್ದರು</p></div>

ಸಿದ್ದರಾಮಯ್ಯ ಅವರು ‘ರಾಜ್ಯ ಪರಿಸರ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು. ಸಲೀಂ ಅಹಮದ್‌, ದಿನೇಶ್ ಗುಂಡೂರಾವ್, ಪಿ.ಎಂ.ನರೇಂದ್ರಸ್ವಾಮಿ, ಅಶೋಕ ಪಟ್ಟಣ, ಮೋಹನ್ ಕೊಂಡಜ್ಜಿ, ಡಿ.ಕೆ.ಶಿವಕುಮಾರ್, ಈಶ್ವರ ಬಿ. ಖಂಡ್ರೆ, ಡಾ.ಎಂ.ಸಿ. ಸುಧಾಕರ್‌, ಎ.ಎಸ್. ಪೊನ್ನಣ್ಣ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಉನ್ನತ ಶಿಕ್ಷಣದಲ್ಲಿ ಪರಿಸರದ ವಿಷಯವನ್ನು ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ADVERTISEMENT

ಅರಣ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಪರಿಸರವನ್ನು ಸಂರಕ್ಷಣೆ, ಅದರ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅವಶ್ಯ. ಪರಿಸರ ಶುದ್ಧವಾಗಿದ್ದರೆ ಜನರ ಆರೋಗ್ಯ, ಪ್ರಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ. ರಾಸಾಯನಿಕ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಹೀಗೇ ಮುಂದುವರಿದರೆ, ಕರ್ನಾಟಕ ಮರುಭೂಮಿಯಾಗಲಿದೆ. ನಾವೆಲ್ಲ ಈಗಲೇ ಎಚ್ಚರಿಕೆ ವಹಿಸಲೇಬೇಕು’ ಎಂದರು.

‘ಬೆಂಗಳೂರು ಒಂದರಲ್ಲೇ ದಿನವೊಂದಕ್ಕೆ 900 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. 1.50 ಕೋಟಿ ಜನಸಂಖ್ಯೆಯನ್ನು ಬೆಂಗಳೂರು ಹೊಂದಿದ್ದು, ಜನಸಂಖ್ಯೆ ಬೆಳೆದಷ್ಟು ಪರಿಸರದ ಮೇಲೆ ಹಾನಿ ಉಂಟಾಗುತ್ತಿದೆ. ಜನಸಂಖ್ಯೆಯ ನಿಯಂತ್ರಣದ ಜೊತೆಗೆ ಪರಿಸರದ ಕುರಿತು ಜ್ಞಾನವನ್ನು ಬೆಳೆಸಿಕೊಳ್ಳಬೇಕಿದೆ’ ಎಂದರು.

20 ನೀರು ನಿಗಾ ಕೇಂದ್ರ: ನರೇಂದ್ರ ಸ್ವಾಮಿ

‘ರಾಜ್ಯದಲ್ಲಿ ಎಂಟು ನದಿ ಮೂಲಗಳಲ್ಲಿ ನೀರು ನಿಗಾ ಕೇಂದ್ರಗಳಿದ್ದು ಇನ್ನೂ 20 ಕೇಂದ್ರಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸ್ಥಾಪಿಸಲಾಗುತ್ತದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ತಿಳಿಸಿದರು. ‘ರಾಜ್ಯದಲ್ಲಿ ಎಲ್ಲ ಭಾಗಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ವಿಲೇವಾರಿಯಾಗಬೇಕು ತ್ಯಾಜ್ಯ ಸಂಸ್ಕರಣಾ ಘಟಕಗಳು (ಎಸ್‌ಟಿಪಿ) ಗುಣಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡರು.

‘ಅರಣ್ಯ ಇಲಾಖೆಗೆ ಬಿಬಿಎಂಪಿ ಧನ ಸಹಾಯ’

‘ಬೆಂಗಳೂರಿನಲ್ಲಿ ಅರಣ್ಯ ಇಲಾಖೆಗೆ ಸೇರಿರುವ ಭೂಮಿಗಳನ್ನು ಲಾಲ್‌ಬಾಗ್‌ ಕಬ್ಬನ್ ಪಾರ್ಕ್ ರೀತಿ ಅಭಿವೃದ್ದಿ ಮಾಡಲು ಅರಣ್ಯ ಇಲಾಖೆ ಮುಂದಾದರೆ ಬಿಬಿಎಂಪಿಯಿಂದ  ಧನಸಹಾಯ ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ‘ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 8.5 ಕೋಟಿ ಸಸಿಗಳನ್ನು ನೆಡಲಾಗಿದೆ. ಈ ವರ್ಷ 2.5 ಕೋಟಿ ಸಸಿಗಳನ್ನು ನೆಡಲಾಗುತ್ತದೆ. 6231 ಎಕರೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಬೆಂಗಳೂರಿನಲ್ಲಿ ಕಳೆದ ದಶಕಗಳಲ್ಲಿ ಐದು ಚದರ ಕಿಲೋಮೀಟರ್‌ ಅರಣ್ಯ ಕಡಿಮೆಯಾಗಿದೆ. ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಜನಾಂದೋಲನವಾಗಬೇಕು’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಪ್ರಶಸ್ತಿ ಪ್ರದಾನ

ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೂವರು ವ್ಯಕ್ತಿ ಹಾಗೂ ಮೂರು ಸಂಸ್ಥೆಗಳಿಗೆ ‘ರಾಜ್ಯ ಪರಿಸರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ‍್ರಶಸ್ತಿಯು ಫಲಕ ಹಾಗೂ ತಲಾ ₹1 ಲಕ್ಷ ನಗದನ್ನು ಒಳಗೊಂಡಿದೆ.

ವೈಯಕ್ತಿಕ ವಿಭಾಗ:

ದಕ್ಷಿಣ ವಲಯ– ಪ್ರೊ. ಕೃಷ್ಣರಾಜ್‌ ಆರ್ಥಿಕ ಅಧ್ಯಯನ ಮತ್ತು ನೀತಿ ಕೇಂದ್ರ ಬೆಂಗಳೂರು.

ಮಲೆನಾಡು ಕರಾವಳಿ ವಲಯ– ಸಿ.ಎಂ. ವೆಂಕಟೇಶ್‌ ಶಂಕರಪುರ ಬಡಾವಣೆ ಚಾಮರಾಜನಗರ.

ಉತ್ತರ ವಲಯ– ಎಚ್‌.ಕೆ. ಪ್ರಕಾಶ್‌ಗೌಡ ಕುಸುಮನಗರ ಕೆಲಗೇರಿ ರಸ್ತೆ ಧಾರವಾಡ.

ಸಂಸ್ಥೆ ವಿಭಾಗ:

ದಕ್ಷಿಣ ವಲಯ– ಎಲೆಕ್ಟ್ರಾನಿಕ್‌ ಸಿಟಿ ಇಂಡಸ್ಟ್ರಿಯಲ್‌ ಟೌನ್‌ಶಿಪ್‌ ಅಥಾರಿಟಿ (ಇಎಲ್‌ಸಿಐಟಿಎ) ಬೆಂಗಳೂರು.

ಮಲೆನಾಡು ಕರಾವಳಿ ವಲಯ– ಏಕಲವ್ಯ ಜಲಜೀವ ಫೌಂಡೇಷನ್‌ ರಾಮದೇವರಪುರ ಹಾಸನ.

ಉತ್ತರ ವಲಯ– ಮಾತಾಜಿ ಸೇವಾ ಸಂಸ್ಥೆ ಬಸವಕಲ್ಯಾಣ ಬೀದರ್‌.

ಶಾಲೆಗಳಲ್ಲಿ ‘ಜಾಗೃತಿ ಕ್ಲಬ್‌’: ಡಿ.ಕೆ.ಶಿವಕುಮಾರ್‌

ಪರಿಸರ ಮತ್ತು ಹವಾಮಾನ ವೈಪರೀತ್ಯದಂತಹ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಶಾಲೆಯಲ್ಲೂ ‘ಜಾಗೃತಿ ಕ್ಲಬ್‌’ಗಳನ್ನು ಕಡ್ಡಾಯವಾಗಿ ಆರಂಭಿಸಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಪ್ರತಿ ‘ಜಾಗೃತಿ ಕ್ಲಬ್‌’ನಲ್ಲೂ ಕನಿಷ್ಠ 25 ವಿದ್ಯಾರ್ಥಿಗಳು ಇರಬೇಕು. ಈ ಜಾಗೃತಿ ಕ್ಲಬ್‌ಗಳು ಪರಿಸರ ಮತ್ತು ನಿಸರ್ಗವನ್ನು ಉಳಿಸುವ ದಿಸೆಯಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಿದೆ. ಅಲ್ಲದೇ ಪ್ರತಿಯೊಂದು ಶಾಲೆಯೂ ಮರಗಳನ್ನು ಬೆಳೆಸಲು ಸಮೀಪದ ಪ್ರದೇಶಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ‘ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಸಸಿಯನ್ನು ದತ್ತು ಪಡೆದು ನೆಡುವ ಆಂದೋಲನ ಆರಂಭಿಸಲಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿ ಮತ್ತು ಅಹಮದಾಬಾದ್‌ನಲ್ಲಿ ಇದ್ದೆ. ಅಲ್ಲಿನ ಉಷ್ಣಾಂಶ ಸುಮಾರು 49 ಡಿಗ್ರಿ ಸೆಲ್ಸಿಯಸ್‌ನಷ್ಟು ಇತ್ತು. ಬೆಂಗಳೂರಿನಲ್ಲಿ 22ರಿಂದ 23 ಡಿಗ್ರಿ ಸೆಲ್ಸಿಯಸ್‌ ಇದೆ. ಈ ವಾತಾವರಣವನ್ನು ನಾವು ಉಳಿಸಿಕೊಳ್ಳಬೇಕು’ ಎಂದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.