ADVERTISEMENT

ಐದು ವರ್ಷಗಳಲ್ಲಿ ಇಪಿಎಫ್‌ಗೆ 7 ಕೋಟಿ ನೋಂದಣಿ: ಸಚಿವೆ ಶೋಭಾ ಕರಂದ್ಲಾಜೆ

ಶೇ.90ರಷ್ಟು ಗುರಿ ಬಾಕಿ: ಉದ್ಯೋಗ ಮೇಳದಲ್ಲಿ ಸಚಿವೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
ಇಪಿಎಫ್‌
ಇಪಿಎಫ್‌   

ಬೆಂಗಳೂರು: ‘ಐದು ವರ್ಷಗಳಲ್ಲಿ ದೇಶದಲ್ಲಿ ಒಟ್ಟು ಏಳು ಕೋಟಿ ಮಂದಿಯನ್ನು ನೌಕರರ ಭವಿಷ್ಯ ನಿಧಿ (ಇಪಿಎಫ್‌) ವ್ಯಾಪ್ತಿಗೆ ತರಲಾಗಿದ್ದು, ಅಸಂಘಟಿತ ವಲಯದವರಿಗೂ ಸೂಕ್ತ ಉದ್ಯೋಗ ಭದ್ರತೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ’ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ಕಬ್ಬನ್‌ ಪಾರ್ಕ್‌ನಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಉದ್ಯೋಗ ಪತ್ರ ವಿತರಿಸಿ ಅವರು ಮಾತನಾಡಿದರು.

‘ಉದ್ಯೋಗ ಪಡೆಯುವುದು ಪ್ರತಿಯೊಬ್ಬರ ಕನಸು. ಸರ್ಕಾರವೇ ಎಲ್ಲರಿಗೂ ಉದ್ಯೋಗ ನೀಡಲು ಆಗುವುದಿಲ್ಲ. ಖಾಸಗಿ ವಲಯದಲ್ಲೂ ಸಾಕಷ್ಟು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಸ್ವಯಂ ಉದ್ಯೋಗಿಗಳೂ ಇದ್ದಾರೆ. ಸುಲಭವಾಗಿ ಯಾರಿಗೂ ಕೆಲಸ ಸಿಗುವುದಿಲ್ಲ. ಶಿಕ್ಷಣ, ಜ್ಞಾನದ ಜತೆಗೆ ಕೌಶಲ ಇದ್ದರೆ ಅವಕಾಶ ಲಭ್ಯವಾಗಲಿದೆ. ಇದನ್ನು ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.

ADVERTISEMENT

ಲೋಕಸಭಾ ಸದಸ್ಯ ಪಿ.ಸಿ.ಮೋಹನ್‌ ಮಾತನಾಡಿ, ‘ದೇಶದಲ್ಲಿ ಒಂದೇ ದಿನ 40 ಕಡೆ ಕಾರ್ಯಕ್ರಮ ನಡೆಸಿ 51 ಸಾವಿರ ಮಂದಿಗೆ ಕೇಂದ್ರ ಸರ್ಕಾರ ಉದ್ಯೋಗ ನೀಡುತ್ತಿದೆ. ಉದ್ಯೋಗ ಸಿಗುತ್ತಿದೆ ಎಂದರೆ ದೇಶ ಪ್ರಗತಿಯಾಗುತ್ತಿದೆ ಎಂದು ವ್ಯಾಖ್ಯಾನಿಸಬಹುದು. ಪಕ್ಕದ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ತಾನ, ನೇಪಾಳದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೆ, ಭಾರತ ಮಾತ್ರ ಕೋವಿಡ್‌ ನಂತರವೂ ವಿಶ್ವದ 4ನೇ ಸದೃಢ ಆರ್ಥಿಕ ದೇಶವಾಗಿ ಬೆಳೆದಿದೆ’ ಎಂದು ಹೇಳಿದರು.

ಕರ್ನಾಟಕ ಅಂಚೆ ಸೇವೆಗಳ ನಿರ್ದೇಶಕ ಸಂದೇಶ್‌ ಮಹದೇವಪ್ಪ, ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಉಮಾ ಶರ್ಮ, ಬಿಎಸ್‌ಎಫ್‌ನ ಡೆಪ್ಯೂಟಿ ಕಮಾಂಡೆಂಟ್‌ ಅನಿಲ್‌ ಮೀನಾ ಹಾಜರಿದ್ದರು.

115 ಮಂದಿಗೆ ಉದ್ಯೋಗ
ಭಾರತೀಯ ರೈಲ್ವೆಯಲ್ಲಿ 30, ರೈಲ್ವೆ ಗಾಲಿ ಕಾರ್ಖಾನೆಯಲ್ಲಿ 19, ಎಸ್‌ಬಿಐ ಹಣಕಾಸು ಸೇವಾ ವಿಭಾಗದಲ್ಲಿ 9, ಕೇಂದ್ರ ಗೃಹ ಸಚಿವಾಲಯದಲ್ಲಿ 8, ನಿಮ್ಹಾನ್ಸ್‌ನಲ್ಲಿ 9, ಆದಾಯ ತೆರಿಗೆ ಇಲಾಖೆಯಲ್ಲಿ ಇಬ್ಬರು, ಜಿಎಸ್‌ಟಿ ವಿಭಾಗದಲ್ಲಿ 16, ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಇಲಾಖೆಯಲ್ಲಿ 4, ಸಂಪರ್ಕ ಇಲಾಖೆಯಲ್ಲಿ 15, ಇಸ್ರೊದಲ್ಲಿ ಒಬ್ಬರು ಹಾಗೂ ಅನಿಲ ಪ್ರಾಧಿಕಾರದಲ್ಲಿ ಇಬ್ಬರು ಸೇರಿ ಒಟ್ಟು 115 ಮಂದಿ ಉದ್ಯೋಗ ಪತ್ರವನ್ನು ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.