ADVERTISEMENT

ಶೇ 40 ಕಮೀಷನ್ ಆರೋಪ ಸಾಬೀತುಪಡಿಸಲಿ

ಗುತ್ತಿಗೆದಾರರ ಸಂಘಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪ ಸವಾಲು

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 15:30 IST
Last Updated 28 ಜೂನ್ 2022, 15:30 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಶಿವಮೊಗ್ಗ: ‘ಶೇ 40 ಕಮಿಷನ್ ಯಾವ ಮಂತ್ರಿ ಯಾರಿಂದ ಕೇಳಿದ್ದರು. ಯಾವ ಗುತ್ತಿಗೆದಾರನಿಂದ ಕೇಳಿದ್ದರು. ಯಾವ ಕೆಲಸಕ್ಕೆ ಕೇಳಿದ್ದರು. ಯಾರಿಗೆ ಕೊಟ್ಟಿದ್ದರು ಎಂಬುದನ್ನು ಗುತ್ತಿಗೆದಾರರ ಸಂಘ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಸಂಘ ರಾಜಕೀಯ ದಾಳಕ್ಕೆ ಬಳಕೆಯಾಗಿದೆ ಎಂಬುದು ಖಚಿತವಾಗಲಿದೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪಕ್ಕೆ ಪ್ರಧಾನ ಮಂತ್ರಿ ಕಚೇರಿ ಪ್ರತಿಕ್ರಿಯಿಸಿದೆ. ವಿವರಣೆ ಕೂಡ ಕೇಳಲಾಗಿದೆ. ಈಗ ಆ ಆರೋಪವನ್ನು ಸಂಘ ಸಾಬೀತು ಪಡಿಸಬೇಕು’ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ನನ್ನ ಬಳಿ ದಾಖಲೆ ಇದೆ ಎಂದು ಕೆಂಪಣ್ಣ ಬಹಳ ದಿನದಿಂದ ಹೇಳುತ್ತಿದ್ದಾರೆ. ಸಿಎಂ ಬೊಮ್ಮಾಯಿ‌ ಕೆಂಪಣ್ಣರ ಅವರನ್ನು ಕರೆದು ಸಭೆ ಮಾಡಿದ್ದರು. ಬೊಮ್ಮಾಯಿ‌ ಅವರ ಸಭೆ ನಂತರ ಕೆಂಪಣ್ಣ ಏನು ಮಾತನಾಡುತ್ತಿಲ್ಲ. ಆದರೆ, ಪ್ರಧಾನಮಂತ್ರಿ ಕಚೇರಿಯಿಂದ ಸ್ಪಷ್ಟನೆ ಕೇಳಿದ್ದಕ್ಕೆ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ’ ಎಂದರು.

‘ನಿಮ್ಮ (ಕೆಂಪಣ್ಣ) ಬಳಿ ದಾಖಲೆ ಇದ್ದರೆ ನೇರವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿ. ದಾಖಲೆ ನಿಮ್ಮ ಬಳಿ ಇಟ್ಟುಕೊಂಡರೇ ಲಾಭ ಏನು’ ಎಂದು ಈಶ್ವರಪ್ಪ ಪ್ರಶ್ನಿಸಿದರು.

ADVERTISEMENT

‘ಪ್ರಧಾನಿ ಮಂತ್ರಿ ಕಚೇರಿ ಕಮಿಷನ್ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದರಿಂದ ರಾಜ್ಯ ಬಿಜೆಪಿಯ ಭ್ರಷ್ಟಾಚಾರ ಬಯಲಾಗಲಿದೆ’ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಡಿ.ಕೆ ಸಹೋದರರಿಗೆ ಸರ್ಕಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಅವರ ಕುಟುಂಬವೇ ಇ.ಡಿ ತನಿಖೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಕೋತಿ ತಾನು ತಿಂದು ಬೇರೆಯವರ ಮುಖಕ್ಕೆ ಒರೆಸಿತು ಅಂತಾರಲ್ಲ ಹಾಗಾಗಿದೆ ಅವರ ಹೇಳಿಕೆ’ ಎಂದು ಛೇಡಿಸಿದರು.

ಆರೋಪದಿಂದ ಮುಕ್ತನಾಗುವೆ: ‘ನನ್ನ ಬಗ್ಗೆ ಗುತ್ತಿಗೆದಾರ ಸಂತೋಷ್ ಕುಮಾರ್ ಹೇಳಿಕೆ ಕೊಟ್ಟರು. ನಾನು ಆತನ ವಿರುದ್ಧ ಕೇಸು ಹಾಕಿದೆ. ಆದರೆ, ದುರಾದೃಷ್ಟವಶಾತ್ ಆತ ಸತ್ತು ಹೋದ. ನಾನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದೆ. ತನಿಖೆ ನಡೆಯುತ್ತಿದೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತದೆ. ಇಲ್ಲದಿದ್ದರೆ ತಪ್ಪಿತಸ್ಥ ಅಲ್ಲ ಎಂದು ಸಾಬೀತಾಗುತ್ತದೆ. ಆರೋಪದಿಂದ ಮುಕ್ತನಾಗುತ್ತೇನೆ ಎಂಬ ನಂಬಿಕೆ ಇದೆ’ ಎಂದು ಈಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.