ADVERTISEMENT

ಈಶ್ವರಪ್ಪ ವಜಾಮಾಡಿ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ: ಯು.ಟಿ. ಖಾದರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 9:59 IST
Last Updated 14 ಏಪ್ರಿಲ್ 2022, 9:59 IST
 ಯು.ಟಿ. ಖಾದರ್‌
ಯು.ಟಿ. ಖಾದರ್‌    

ಮಂಗಳೂರು: ‘ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದ ತನಿಖೆಯು ನಿಷ್ಪಕ್ಷಪಾತವಾಗಿ ನಡೆಯಬೇಕಿದ್ದರೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ರಾಜೀನಾಮೆ ನೀಡುವುದು ಅನಿವಾರ್ಯ. ಅವರು ರಾಜೀನಾಮೆ ಕೊಡದಿದ್ದರೆ, ಮುಖ್ಯಮಂತ್ರಿಯೇ ಅವರನ್ನು ವಜಾ ಮಾಡಿ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್‌ ಒತ್ತಾಯಿಸಿದರು.

ಗುರುವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಾದರೆ ತನಿಖೆ ಮುಗಿಯುವವರೆಯೂ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು ಸಂಪ್ರದಾಯ. ರಾಜೀನಾಮೆ ನೀಡುವುದಿಲ್ಲ ಎಂದು ಹಠಹಿಡಿಯುವ ಮೂಲಕ ಈಶ್ವರಪ್ಪ ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ. ಬಿಜೆಪಿಯ ನಾಯಕರೂ ಅವರ ನಿಲುವನ್ನು ಬೆಂಬಲಿಸುತ್ತಿದ್ದಾರೆ. ಇದರಿಂದ ಬಿಜೆಪಿಯ ಮುಖವಾಡ ಬಯಲಾಗಿದೆ’ ಎಂದರು.

‘ಕಾರ್ಯಾದೇಶ ಇಲ್ಲದೆಯೇ ಸಂತೋಷ್‌ ಅವರು ಕೆಲಸಗಳನ್ನು ಮಾಡಿದ್ದಾರೆ’ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. ಹಾಗಿದ್ದರೆ, ಸರ್ಕಾರಿ ಜಾಗದಲ್ಲಿ ಕಾಮಗಾರಿ ನಡೆಯುತ್ತಿದ್ದಾಗ ಅಲ್ಲಿನ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಏನುಮಾಡುತ್ತಿದ್ದರು ಎಂದು ಖಾದರ್‌ ಪ್ರಶ್ನಿಸಿದರು.

ADVERTISEMENT

ತಮ್ಮ ಪಕ್ಷದ ಕಾರ್ಯಕರ್ತನನ್ನೇ ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ ಎಂದಮೇಲೆ ಜನಸಾಮಾನ್ಯರ ಗತಿ ಏನು ಎಂಬುದು ಈಗ ಜನರಿಗೆ ಸ್ಪಷ್ಟವಾಗಿದೆ. ಕಾಂಗ್ರೆಸ್‌ ಆಡಳಿತ ಹಾಗೂ ಬಿಜೆಪಿ ಆಡಳಿತವನ್ನು ಜನರು ತೂಕಮಾಡಿ ನೋಡಲು ಆರಂಭಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.