ADVERTISEMENT

Aero India: ಕಡಲಾಳದಲ್ಲಿ ಜಲಾಂತರ್ಗಾಮಿಯಂತೆ ನಟಿಸುವ ‘ಮಾರೀಚ’

ಇ.ಎಸ್.ಸುಧೀಂದ್ರ ಪ್ರಸಾದ್
Published 11 ಫೆಬ್ರುವರಿ 2025, 21:22 IST
Last Updated 11 ಫೆಬ್ರುವರಿ 2025, 21:22 IST
ಡಿಆರ್‌ಡಿಒ ಹಾಗೂ ನೌಕಾಪಡೆಯ ಭೌತಿಕ ಮತ್ತು ಸಾಗರ ಅಧ್ಯಯನ ಪ್ರಯೋಗಾಲಯ ಅಭಿವೃದ್ಧಿಪಡಿಸಿರುವ ಜಲಾಂತರ್ಗಾಮಿ ಮಾದರಿಯ ಶಬ್ದ ಹೊರಹೊಮ್ಮಿಸುವ ಸಾಧನ ಇಎಸ್‌ಪಿಟಿಎಸ್‌
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಡಿಆರ್‌ಡಿಒ ಹಾಗೂ ನೌಕಾಪಡೆಯ ಭೌತಿಕ ಮತ್ತು ಸಾಗರ ಅಧ್ಯಯನ ಪ್ರಯೋಗಾಲಯ ಅಭಿವೃದ್ಧಿಪಡಿಸಿರುವ ಜಲಾಂತರ್ಗಾಮಿ ಮಾದರಿಯ ಶಬ್ದ ಹೊರಹೊಮ್ಮಿಸುವ ಸಾಧನ ಇಎಸ್‌ಪಿಟಿಎಸ್‌ ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಕಡಲಾಳದಲ್ಲಿ ದಾಳಿ ನಡೆಸುವ ಶತ್ರುಗಳ ಜಲಾಂತರ್ಗಾಮಿ ಮೇಲೆ ದಾಳಿ ನಡೆಸಲು ಬಳಸುವ ಕ್ಷಿಪಣಿ ಪ್ರಯೋಗದಲ್ಲಿ, ಅದೇ ಮಾದರಿಯ ಶಬ್ದ ಹೊರಹೊಮ್ಮಿಸುವ ಕಡಿಮೆ ಖರ್ಚಿನ ಸಾಧನವನ್ನು ಡಿಆರ್‌ಡಿಒ ಹಾಗೂ ನೌಕಾಪಡೆಯ ಭೌತಿಕ ಮತ್ತು ಸಾಗರ ಅಧ್ಯಯನ ಪ್ರಯೋಗಾಲಯ ಅಭಿವೃದ್ಧಿಪಡಿಸಿವೆ.

ಕೇರಳದ ಕೊಚ್ಚಿಯಲ್ಲಿರುವ ಈ ಕೇಂದ್ರವು ಇಎಸ್‌ಪಿಟಿಎಸ್‌ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಈ ಸಾಧನವು ಇಲ್ಲಿ ನಡೆಯುತ್ತಿರುವ ಏರೊ ಇಂಡಿಯಾದಲ್ಲಿ ಪ್ರದರ್ಶನಕ್ಕಿದೆ. ಇದರಿಂದ ನೌಕಾ ಪಡೆ ಹೆಚ್ಚಿನ ಹಣ ಉಳಿತಾಯ ಮಾಡಲು ಅವಕಾಶ ಸಿಗಲಿದೆ ಎಂದು ಪ್ರಯೋಗಾಲಯದ ವಿಜ್ಞಾನಿಗಳು ತಿಳಿಸಿದರು.

‘ರಾಮಾಯಣದಲ್ಲಿ ಹೊಂಬಣ್ಣದ ಮಾಯಾ ಜಿಂಕೆಯನ್ನು ಕಂಡ ಸೀತೆ ಅದು ಬೇಕೆನ್ನುತ್ತಾಳೆ. ರಾವಣ ಕಳುಹಿಸಿದ ಮಾರೀಚ ಇಂಥ ವೇಷ ಧರಿಸಿರುತ್ತಾನೆ. ನಂತರ ರಾಮನ ಬಾಣಕ್ಕೆ ಹತನಾಗುತ್ತಾನೆ. ಇದನ್ನೇ ಆಧಾರವಾಗಿಟ್ಟುಕೊಂಡ ಸಾಧನ ಇಎಸ್‌ಪಿಟಿಎಸ್‌’ ಎಂದು ವಿಜ್ಞಾನಿ ರಾಜೀವ್ ವಿವರಿಸಿದರು.

ADVERTISEMENT

‘ಕಡಲಾಳದಲ್ಲಿ ಸಾಗುವ ಜಲಾಂತರ್ಗಾಮಿಗಳನ್ನು ನಾಶಪಡಿಸಲು ನೀರಿನಲ್ಲೇ ಸಾಗುವ ಕ್ಷಿಪಣಿಗಳನ್ನು ಬಳಸಲಾಗುತ್ತದೆ. ಆದರೆ, ಇದರ ಪ್ರಯೋಗಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಜಲಾಂತರ್ಗಾಮಿಯನ್ನು ನಷ್ಟ ಮಾಡಿಕೊಳ್ಳುವ ಬದಲು, ಅದೇ ಶಬ್ದ ಹೊರಹೊಮ್ಮಿಸುವ ಪುಟ್ಟ ಸಾಧನವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇಎಸ್‌ಪಿಟಿಎಸ್ ಸಾಧನವು ಇಲ್ಲಿ ಸೋನಾರ್ ಶಬ್ದ ಹೊರಹೊಮ್ಮಿಸುತ್ತ ಜಲಾಂತರ್ಗಾಮಿಯಂತೆ ನಟಿಸುತ್ತದೆ. ಈ ಶಬ್ದವನ್ನು ಬೆನ್ನತ್ತುವ ಕ್ಷಿಪಣಿ ಗುರಿಯನ್ನು ತಲುಪಿ ತನ್ನ ಕೆಲಸ ಮುಗಿಸುತ್ತದೆ’ ಎಂದು ವಿವರಿಸಿದರು.

‘ಇಎಸ್‌ಪಿಟಿಎಸ್ ಸಾಧನವನ್ನು ಈ ವರ್ಷ ಅಭಿವೃದ್ಧಿಪಡಿಸಲಾಗಿದ್ದು, ಶೀಘ್ರದಲ್ಲಿ ಇದು ನೌಕಾ ಪಡೆಯನ್ನು ಸೇರಲಿದೆ. ಇದು ವೆಚ್ಚ ಕಡಿಮೆ ಮಾಡುವ ಡಿಆರ್‌ಡಿಒ ಪ್ರಯತ್ನವಾಗಿದೆ’ ಎಂದರು.

‘ಇದರೊಂದಿಗೆ ಯುದ್ಧ ನೌಕೆಗಳ ಸೌರ, ಪೆರಿಸ್ಕೋಪ್‌, ರೇಡಾರ್‌ ಹೀಗೆ ಹಲವು ವ್ಯವಸ್ಥೆಗಳನ್ನು ನಿರ್ವಹಿಸುವ ನೆಟ್‌ವರ್ಕ್‌ ವ್ಯವಸ್ಥೆ ‘ಇಂಟಿಗ್ರೇಟೆಡ್‌ ಕಾಂಬ್ಯಾಟ್ ಸಿಸ್ಟಮ್‌’ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ಪ್ರತಿಯೊಂದಕ್ಕೂ ಒಂದೊಂದು ನಿರ್ವಹಣಾ ಸಾಧನಗಳಿದ್ದವು. ಈಗ ಎಲ್ಲವನ್ನೂ ಒಂದು ವ್ಯವಸ್ಥೆಯೊಳಗೆ ತರಲಾಗಿದೆ. ಇದರಿಂದ ನಿರ್ವಹಣೆಯೂ ಸುಲಭವಾಗಲಿದೆ. ಜತೆಗೆ ಖರ್ಚು ಕೂಡಾ ಕಡಿಮೆ’ ಎಂದು ರಾಜೀವ್ ವಿವರಿಸಿದರು.

'ಇಂಟಿಗ್ರೇಟೆಡ್‌ ಕಾಂಬ್ಯಾಟ್ ಸಿಸ್ಟಮ್‌ ಸ್ವದೇಶಿ ನಿರ್ಮಿತ ನೌಕೆಗಳಲ್ಲಿ ಮಾತ್ರವಲ್ಲ, ಆಮದು ಮಾಡಿಕೊಂಡ ನೌಕೆಗಳಲ್ಲೂ ಕರಾರುವಾಕ್ಕಾಗಿ ಕೆಲಸ ಮಾಡಲಿದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.