ಬೆಂಗಳೂರು: ಮುಸ್ಲಿಂ ಸಮುದಾಯದವರಲ್ಲಿ ವೈಜ್ಞಾನಿಕ ಮನೋಭಾವ ಉತ್ತೇಜಿಸಲು ಮೌಲಾನಾ ಆಜಾದ್ ಟ್ರಸ್ಟ್ ರಚನೆ, ಐಟಿಐ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಿಸುವ ಯೋಜನೆಗಳಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ನಿರ್ಣಯಗಳು:
* ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಆಧುನಿಕ ಶಿಕ್ಷಣ ನೀಡಲು ₹ 25 ಕೋಟಿ ವೆಚ್ಚದಲ್ಲಿ ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆ.
* ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಐಟಿಐಗಳಲ್ಲಿ ತರಬೇತಿ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ₹ 11.75 ಕೋಟಿ ವೆಚ್ಚದಲ್ಲಿ ಟೂಲ್ ಕಿಟ್ ವಿತರಿಸುವುದು.
* ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ 90,000 ಕಾರ್ಮಿಕರಿಗೆ ₹ 42.39 ಕೋಟಿ ವೆಚ್ಚದಲ್ಲಿ ಸುರಕ್ಷತಾ ಕಿಟ್ ವಿತರಣೆ.
* ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 76,000 ಕಾರ್ಮಿಕರಿಗೆ ₹ 23.18 ಕೋಟಿ ವೆಚ್ಚದಲ್ಲಿ ಗಾರೆ ಕೆಲಸದ ಕಿಟ್.
* ಬೆಳಗಾವಿಯ ರಾಮತೀರ್ಥನಗರ ಬಡಾವಣೆಯಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳುವ ₹ 28.98 ಕೋಟಿ ವೆಚ್ಚದ ಏಳು ಕಾಮಗಾರಿಗಳ ಅಂದಾಜು ಪಟ್ಟಿಗೆ ಅನುಮೋದನೆ.
* ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಬಲೇಶ್ವರ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ.
* ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಜತೆಗಿನ ರಿಯಾಯಿತಿ ಒಪ್ಪಂದದ ಅವಧಿ ವಿಸ್ತರಣೆ
* ರಾಯಚೂರು ಜಿಲ್ಲೆ ಊಟಿ ಚಿನ್ನದ ಗಣಿಯಲ್ಲಿ ಭೂ ಕೆಳಮೈ ಗಣಿ ಅಭಿವೃದ್ಧಿ ಕಾಮಗಾರಿಗಳ ₹ 63.08 ಕೋಟಿ ವೆಚ್ಚದ ಪರಿಷ್ಕೃತ ಅಂದಾಜು ಪಟ್ಟಿಗೆ ಅನುಮೋದನೆ.
* ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಆವರಣದಲ್ಲಿ ₹ 98.93 ಕೋಟಿ ವೆಚ್ಚದಲ್ಲಿ ಡಾ. ಜಗಜೀವನ್ ರಾಂ ಸಂಶೋಧನೆ ಮತ್ತು ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಪಟ್ಟಿಗೆ ಅನುಮೋದನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.